ಹರಿಪ್ರಸಾದ್ ನಂದಳಿಕೆ ಕಾರ್ಕಳ
ಒಂದೆಡೆ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಮತ್ತೊಂದೆಡೆ ಭಾರಿ ಮಂಜು ಕವಿಯುತ್ತಿದೆ. ಜತೆಗೆ ಹಲವೆಡೆ ಗುಡ್ಡಗಳು ಕುಸಿಯುತ್ತಿದ್ದು, ಈ ಸಮಸ್ಯೆಗಳಿಂದಾಗಿ ಮಾಳ ಘಾಟ್‌ನಲ್ಲಿ ಸಂಚರಿಸುವುದು ಪ್ರಸ್ತುತ ಅಪಾಯಕಾರಿಯಾಗಿದೆ.
ಕುದುರೆಮುಖ-ಮಾಳ ರಾಷ್ಟ್ರೀಯ ಹೆದ್ದಾರಿಯು ದಟ್ಟ ಅರಣ್ಯದೊಳಗಿನಿಂದ ಹಾದುಹೋಗಿದ್ದು, ಶೃಂಗೇರಿ, ಕಳಸ, ಹೊರನಾಡು ಸಹಿತ ಪ್ರಸಿದ್ಧ ಪುಣ್ಯಸ್ಥಳಗಳಿಗೆ ತೆರಳುವವರು ಕಾರ್ಕಳ ತಾಲೂಕಿನ ಮಾಳ ಘಾಟ್ ಮೂಲಕವೇ ಸಾಗಬೇಕು. ಆದರೆ ಈ ಭಾಗದಲ್ಲಿ ಮಳೆ ಹೆಚ್ಚಿರುವುದರಿಂದ ಪ್ರತೀ ಮಳೆಗಾಲವೂ ಈ ಘಾಟಿಯ ಮೂಲಕ ಸಂಚರಿಸುವುದು ಅಪಾಯ ಮೈಮೇಲೆ ಎಳೆದುಕೊಂಡಂತೆ.
ಕೆಲವು ವರ್ಷಗಳಿಂದ ಸಣ್ಣ ಮಳೆಗೂ ಮಾಳ ಘಾಟ್‌ನಲ್ಲಿ ಗುಡ್ಡಗಳು ಕುಸಿಯುತ್ತಿದ್ದು, ಮರ-ಕೊಂಬೆಗಳು ಮುರಿದು ಬೀಳಲಾರಂಭಿಸಿವೆ. ಜತೆಗೆ ಬಂಡೆ ಕಲ್ಲುಗಳು ಹಠಾತ್ ಘಾಟಿ ರಸ್ತೆ ಮೇಲೆ ಉರುಳುತ್ತಿದ್ದು, ವಾಹನ ಸಂಚಾರ ಸಂದರ್ಭ ಇದುವೇ ಪ್ರಮುಖ ಸಮಸ್ಯೆಯಾಗಿದೆ.
ಸಂಚಾರ ವೇಳೆ ಎಚ್ಚರಿಕೆ: ನಿತ್ಯ ಸಂಚರಿಸುವವರೆ ಒಂದಿಲ್ಲೊಂದು ಅಪಾಯಕ್ಕೆ ತುತ್ತಾಗುತ್ತಿರುತ್ತಾರೆ. ಹೊರ ರಾಜ್ಯ, ಜಿಲ್ಲೆ ಅಥವಾ ಸ್ಥಳೀಯರಲ್ಲದವರು ಮಾಳಘಾಟಿ ರಸ್ತೆಯಲ್ಲಿ ಸಂಚರಿಸುವಾಗ ಅತಿ ಎಚ್ಚರಿಕೆ ಅಗತ್ಯವಿದೆ. ಸಮೀಕ್ಷೆ ಪ್ರಕಾರ ಹೊರ ಜಿಲ್ಲೆ, ಹೊರರಾಜ್ಯದವೇ ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದಲ್ಲಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಘಾಟಿಯಲ್ಲಿ ವಾಹನ ಚಲಾಯಿಸುವಾಗ ಚಾಲಕರು ಸ್ವಯಂ ವೇಗಮಿತಿ ಅನುಸರಿಸಬೇಕಿದ್ದು, ಅತಿ ವೇಗ ಅಥವಾ ಅಜಾಗರೂಕತೆಯಿಂದ ಚಲಾಯಿಸಿದರೆ ಅಪಾಯ ಕಟ್ಟಿಟ್ಟಬುತ್ತಿ.
ಗುಡ್ಡ ಕುಸಿದ ಸ್ಥಳಕ್ಕೆ ಕಾರ್ಕಳ ತಹಸೀಲ್ದಾರ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ ವಾಹನ ಸವಾರರು ತಿರುವುಗಳಲ್ಲಿ ಹುಚ್ಚು ಸಾಹಕ್ಕೆ ಕೈಹಾಕದಂತೆ ಎಚ್ಚರ ವಹಿಸಲು ಸೂಚಿಸಿದ್ದಾರೆ.
ಮಳೆಗಾಲದಲ್ಲಿ ಘಾಟಿ ರಸ್ತೆಯಲ್ಲಿ ಸ್ವಲ್ಪ ಎಡವಿದರೂ ಅಪಾಯ ಕಟ್ಟಿಟ್ಟಬುತ್ತಿ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಗುಡ್ಡ ಕುಸಿತವಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪ್ರವೀಣ್ ಸಾಲ್ಯಾನ್, ಸ್ಥಳೀಯ. ಒಂದೆಡೆ ವಕ್ರ ರಸ್ತೆ ಹಾಗೂ ಅಲ್ಲಲ್ಲಿ ಗುಡ್ಡ ಕುಸಿತವಾಗುತ್ತಿದೆ. ಹೀಗಾಗಿ ಇಲ್ಲಿನ ರಸ್ತೆಯ ಸಂಚರಿಸುವಾಗ ಎಚ್ಚರಿಕೆ ಅತೀ ಅಗತ್ಯ. ರಾತ್ರಿ ಹೊತ್ತಿನಲ್ಲಿ ಮಂಜಿನ ನಡುವೆ ಈ ಹೆದ್ದಾರಿಯಲ್ಲಿ ವಾಹನ ಚಲಾಯಿಸುವುದೇ ತುಂಬಾ ಅಪಾಯಕಾರಿ ಹಾಗೂ ಕಷ್ಟವೂ ಹೌದು. ಬಸವರಾಜ್, ವಾಹನ ಸವಾರ. https://www.vijayavani.net/stage-presentation-by-children-is-not-easy https://www.vijayavani.net/kargil-victory-day-celebration-3