ಜಿಲ್ಲೆ

ಗದಗ ವಿವಿಗೆ ಮಹಾತ್ಮ ಗಾಂಧಿ ಹೆಸರಿಡಿ

ರಮೇಶ ಮೇಳಕುಂದಾ

ಕಲಬುರಗಿ: ಮಹಾತ್ಮ ಗಾಂಧಿ ಸರ್ವಾಧ್ಯಕ್ಷತೆಯಲ್ಲಿ ನಡೆದ ಬೆಳಗಾವಿಯ ಕಾಂಗ್ರೆಸ್ ಮಹಾ ಅಧಿವೇಶನದ ಶತಮಾನೋತ್ಸವದ ಸಂದರ್ಭದಲ್ಲಿಯೇ ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಮಹಾತ್ಮ ಗಾಂಧಿ ಎಂದು ನಾಮಕರಣ ಮಾಡಬೇಕು ಎಂದು ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್.ಪಾಟೀಲ್ ಆಗ್ರಹಿಸಿದರು.

ಬೆಳಗಾವಿಯಲ್ಲಿ ಜ.೨೬ರಂದು ಬೆಳಗ್ಗೆ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ ನಡೆಯಲಿದ್ದು, ಗ್ರಾಮೀಣ ಭಾರತದ ಅಭಿವೃದ್ಧಿಯ ಕನಸು ಕಂಡ ಮಹಾತ್ಮ ಗಾಂಧಿ ಹೆಸರು ವಿವಿಗೆ ನಾಮಕರಣ ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಹಿರಿಯ ಪತ್ರಕರ್ತ ಸುಧೀಂದ್ರ ಕುಲಕರ್ಣಿ ಅವರು ಗ್ರಾಮೀಣಾಭಿವೃದ್ಧಿಗೆ ಐದು ಸಲಹೆ ನೀಡಿದ್ದು, ಅದನ್ನು ಅಳವಡಿಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಹಳ್ಳಿ ಮತ್ತು ನಗರದ ಮಧ್ಯೆ ಸೃಷ್ಟಿಯಾಗಿರುವ ಕಂದಕವನ್ನು ದೂರ ಮಾಡಿ, ಗ್ರಾಮೀಣಾಭಿವೃದ್ಧಿಗೆ ಸರ್ಕಾರಗಳು ಗಮನ ನೀಡಬೇಕು ಎಂದರು.

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಚರ್ಚೆಗಳು ಬೆಳಗಾವಿ ಅಧಿವೇಶನದಲ್ಲಿ ಮಾತ್ರ ಯಾಕೆ ನಡೆಯಬೇಕು? ಬೆಂಗಳೂರಿನ ಅಧಿವೇಶನದಲ್ಲೂ ಚರ್ಚೆ ನಡೆಯಲಿ. ಎಲ್ಲರೂ ಸಕ್ರಿಯರಾಗಿ ಪಾಲ್ಗೊಂಡಾಗ ಮಾತ್ರ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಸಾಧ್ಯ ಎಂದು ಹೇಳಿದರು.

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಪಾನ ನಿಷೇಧದ ಕುರಿತು ಕ್ರಾಂತಿಕಾರಕ ನಿರ್ಣಯ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರದಿಂದ ಪೂರ್ಣ ಪಾನ ನಿಷೇಧ ಸಾಧ್ಯವಿಲ್ಲ. ಸಂಸ್ಕೃತಿ, ಸಂಸ್ಕಾರ ಎಂದು ಬೀಗುವ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷಿö್ಮÃ ಹೆಬ್ಬಾಳಕರ್ ಬಗ್ಗೆ ಬಳಸಿದ ಪದದ ಬಗ್ಗೆ ಬಿಜೆಪಿ ಶಾಸಕರೇ ಹೆಬ್ಬಾಳಕರ ಬಳಿ ಬಂದು ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ಸದ್ಯ ಯಾರ ಹೆಸರು ಹೇಳಲ್ಲ. ಇಂತಹ ಘಟನೆಗಳು ನಡೆಯಬಾರದು. ಆಣೆ ಪ್ರಮಾಣದ ಮೇಲೆ ನನಗೆ ನಂಬಿಕೆ ಇಲ್ಲ. ಅದು ಅವರಿಬ್ಬರ ಮಧ್ಯದ ಮಾತು ಎಂದರು.

ಬಸವ ಸೇವಾ ಪ್ರತಿಷ್ಠಾನದ ರಾಜಶೇಖರ ಯಕ್ಕಂಚಿ, ಆಳಂದ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಾಬುರಾವ ಇದ್ದರು.