ಜಿಲ್ಲೆ

ಆಳಂದ ಶಾಸಕ ಬಿಆರ್‌ಪಿ ವಸತಿ ಅಕ್ರಮ ಬಾಂಬ್‌ಗೆ ಸಾಕ್ಷಿ : ಮನಿ ಕೊಟ್ಟರೆ ಮನೆ ಸಾಕ್ಷಿ ಗ್ರಾಮಸಭೆ ವಿಡಿಯೊ ವೈರಲ್

ಬಾಬುರಾವ ಯಡ್ರಾಮಿ

ಸಿಡಿದ ಶಾಸಕ ಪಾಟೀಲ್‌ರಿಗೆ ಸಿಎಂ ಬುಲಾವ್

ವಿಜಯವಾಣಿ ಸುದ್ದಿಜಾಲ ಕಲಬುರಗಿ

ರಾಜೀವಗಾಂಧಿ ವಸತಿ ನಿಗಮದಿಂದ ಹಣ ಕೊಟ್ಟವರಿಗೆ ಮನೆ ಮಂಜೂರಾಗಿವೆ ಎಂಬ ಆಳಂದ ಶಾಸಕ ಬಿ.ಆರ್.ಪಾಟೀಲ್ ಮಾಡಿರುವ ಆರೋಪಕ್ಕೆ ಕೆಲ ಸಾಕ್ಷಿ ಲಭ್ಯವಾಗಿವೆ. ಅಲ್ಲದೆ ಅಲ್ಪಸಂಖ್ಯಾತರ ಇಲಾಖೆಯ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ಈ ಬೆಳವಣಿಗೆಗಳಿಂದಾಗಿ ವಸತಿ ಅಕ್ರಮ ಹೊಸ ತಿರುವು ಪಡೆದುಕೊಂಡAತಾಗಿದೆ. ಈ ಮಧ್ಯೆ ಸರ್ಕಾರ ಮತ್ತಷ್ಟು ಮುಜುಗರ ಅನುಭವಿಸಬಾರದು ಸಂಕಷ್ಟಕ್ಕೆ ಸಿಲುಕಬಾರದು ಎಂಬ ಮುಂಜಾಗ್ರತೆ ವಹಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಾಸಕರಿಗೆ ಬೆಂಗಳೂರಿಗೆ ಬುಲಾವ್ ನೀಡಿದ್ದಾರೆ.

ವಸತಿ ಯೋಜನೆ ಅಕ್ರಮ ಆಳಂದ ಕ್ಷೇತ್ರದ ಜತೆಗೆ ಜಿಲ್ಲೆಯ ಅಫಜಲಪುರ, ನೆರೆಯ ವಿಜಯಪುರ ಜಿಲ್ಲೆಯ ನಾಗಠಾಣ, ಹೊಸಪೇಟೆ ಇನ್ನಿತರ ಕಡೆಗಳಲ್ಲಿ ಸಹ ಮನಿ ಕೊಟ್ಟವರಿಗೆ ವಸತಿ ಇಲಾಖೆಯಿಂದ ಮನೆ ಮಂಜೂರಾಗಿವೆ ಎಂಬ ಆರೋಪಗಳು ಪ್ರತಿಧ್ವನಿಸುವ ವಸತಿ ಅಕ್ರಮ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ.

ಆಳAದ ತಾಲೂಕಿನ ಧಂಗಾಪುರ ಗ್ರಾಪಂ ವ್ಯಾಪ್ತಿಯ ಬಟ್ಟರಕಿ ಗ್ರಾಮದಲ್ಲಿ ಜರುಗಿದ ಗ್ರಾಮಸಭೆಯಲ್ಲಿ ಹಣ ಕೊಟ್ಟವರಿಗೆ ಮಾತ್ರ ಮನೆಗಳನ್ನು ಮಂಜೂರು ಮಾಡಿ ಪಟ್ಟಿ ಸಿದ್ಧಪಡಿಸಲಾಗಿದೆ. ಹೆಸರಿಗಷ್ಟೆ ಗ್ರಾಮಸಭೆ ಮಾಡಲಾಗುತ್ತಿದೆ ಎಂದು ಸಭೆ ನಡೆದ ಕಾಲಕ್ಕೆ ಜನರು ಆರೋಪಿಸಿದ ವಿಡಿಯೋ ಈಗ ವೈರಲ್ ಆಗಿದೆ.

ರಾಜೀವಗಾಂಧಿ ವಸತಿ ಮತ್ತು ಡಾ.ಅಂಬೇಡ್ಕರ್ ವಸತಿ ಯೋಜನೆಯಡಿ ಗ್ರಾಪಂ ಸದಸ್ಯರ ಪತಿ, ಪುತ್ರರು ಫಲಾನುಭವಿಗಳಿಂದ ೧೦ರಿಂದ ೧೫ ಸಾ.ರೂ. ಪಡೆದುಕೊಂಡು ಮನೆಗಳನ್ನು ಮಂಜೂರು ಮಾಡಿದ್ದಾರೆ ಎಂದು ಧಂಗಾಪುರ ಗ್ರಾಪಂನಲ್ಲಿ ವಂಚಿತ ಫಲಾನುಭವಿ ಶಾಂತಮ್ಮ ದೂರಿದ್ದಾರೆ.

ಕವಲಗಾ ಗ್ರಾಪಂಗೆ ೨೦೦ ಮನೆ ಮಂಜೂರಾಗಿವೆ, ಅದರ ವ್ಯಾಪ್ತಿಯಲ್ಲಿ ಬರುವ ಝಳಕಿ ಗ್ರಾಮಕ್ಕೆ ೮೬ ಮನೆಗಳು ಹಂಚಿಕೆಯಾಗಿದ್ದು, ಬಹುತೇಕ ಮನೆಗಳನ್ನು ರೊಕ್ಕ ಕೊಟ್ಟವರಿಗೆ ಕೊಟ್ಟಿದ್ದಾರೆ ಎಂದು ನೊಂದ ಮಹಿಳೆ ದೂರಿದರು. ನನ್ನಿಂದಲೂ ರೊಕ್ಕಾ ತಂಡೊAಡಾರಿ ಇನ್ನೂ ಮನಿ ಕೊಟ್ಟಿಲ್ಲ,ಕೇಳಿದ್ರೆ ಇನ್ನೊಂದಿಷ್ಟು ದಿನ ತಡಿ ಅಂತಾರಿ ಎಂದು ಮಾಧ್ಯಮದವರ ಮುಂದೆ ಗೋಳಿಟ್ಟರು.

ಅಫಜಲಪುರ ಕ್ಷೇತ್ರದ ಫರಹತಾಬಾದ ಗ್ರಾಮದ ಮಲ್ಲಮ್ಮ ಎಂಬುವರು ಹಣ ಕೊಟ್ಟರೆ ಮಾತ್ರ ಮನೆ ಕೊಡುವುದಾಗಿ ಹೇಳಿದ್ದಾರೆ ಎಂದು ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ. ಈ ಮಧ್ಯೆ ಅಫಜಲಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಶಿವಕುಮಾರ ನಾಟೀಕಾರ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಮನೆಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.