ನಾಪೋಕ್ಲು: ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವ ಭಾನುವಾರ, ಸೋಮವಾರ ಎರಡು ದಿನ ವಿಜೃಂಭಣೆಯಿಂದ ನೆರವೇರಿತು. ಮಂಗಳವಾರ ದೇವಾಲಯದ ಆವರಣದಲ್ಲಿ ನಡೆದ ಎರಡು ಪ್ರಮುಖ ಕೋಲಗಳೊಂದಿಗೆ ಉತ್ಸವ ಸಂಪನ್ನಗೊಂಡಿತು.
ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಬೆಳಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲಗಳು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಮೇಲೇರಿ (ಕೆಂಡಸೇವೆ) ಗಮನ ಸೆಳೆದವು. ಈ ಸಂದರ್ಭ ಊರ ಹಾಗೂ ಪರಊರ ಭಕ್ತರು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಶ್ರದ್ಧಾ-ಭಕ್ತಿಯಿಂದ ವೀಕ್ಷಿಸಿ ದೇವರಿಗೆ ವಿವಿಧ ರೀತಿಯ ಹರಕೆ, ಸೇವೆಗಳನ್ನು ಸಮರ್ಪಿಸಿ ಭಾವಪರವಶರಾದರು.
ದೇವಾಲಯದ ವತಿಯಿಂದ ಉತ್ಸವ ವೀಕ್ಷಿಸಲು ಬಂದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಅಪರಾಹ್ನ ಜರುಗಿದ ವಿಷ್ಣುಮೂರ್ತಿ ಕೋಲವನ್ನು ಭಕ್ತರು ಭಯಭಕ್ತಿಯಿಂದ ವೀಕ್ಷಿಸಿದರು.
ಉತ್ಸವದ ಅಂಗವಾಗಿ ಹರಕೆಯ ನಾಯಿ ಒಪ್ಪಿಸಲಾಯಿತು. ಭಾನುವಾರ ಕೊಟ್ಟಿ ಹಾಡಿ, ಸೋಮವಾರ ರಾತ್ರಿ ದೀಪಾರಾಧನೆ ಹಾಗೂ ಮಂಗಳವಾರ ವಿವಿಧ ಭೂತಾರಾಧನೆ ಹಾಗೂ ಮೇಲೇರಿ ವಾರ್ಷಿಕ ಹಬ್ಬ ನಡೆಯಿತು. ದೇವಾಲಯದ ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ದೇವಾಲಯದ ತಕ್ಕ ಮುಖ್ಯಸ್ಥರು ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಉತ್ಸವದಲ್ಲಿ ಶಾಸಕ ಭಾಗಿ: ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಭಾಗವಹಿಸಿದ್ದರು. ಈ ವೇಳೆ ದೇವರ ಅಭಯ ಕಾರ್ನಿಕ ನುಡಿಯ ಮೂಲಕ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಈ ಶ್ರೀ ಕ್ಷೇತ್ರ ಅತ್ಯಂತ ಪುರಾತನ ಇತಿಹಾಸ ಹೊಂದಿರುವ ಶ್ರದ್ಧಾ ಕೇಂದ್ರವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಇಲ್ಲಿ ಭಾಗವಹಿಸುತ್ತಾರೆ. ಇಲ್ಲಿಯ ವ್ಯವಸ್ಥೆ ಕೂಡ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.