ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರಲ್ಲಿ ಬಾಲಕಿ ವಿವಾಹಕ್ಕೆ ಮುಂದಾಗಿದ್ದ ಪಾಲಕರ ಮನೆಗೆ ಭೇಟಿ ನೀಡಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಚರ್ಚಿಸಿದರು. ತಹಸೀಲ್ದಾರ್ ದತ್ತಾತ್ರೇಯ ಗಾದಾ, ತಾಪಂ ಇಒ ರಮೇಶ ಸುಲ್ಫಿ, ಸಿಡಿಪಿಒ ಗೌತಮ ಶಿಂಧೆ, ಪಿಎಸ್‌ಐ ಜಯಶ್ರೀ ಹೊಡಲ್, ವಿನೋದ ಕುರಿ ಇತರರಿದ್ದರು. 
ಜಿಲ್ಲೆ

ಮಕ್ಕಳ ರಕ್ಷಣಾ ಘಟಕದ ಮೊರೆ ಹೋದ ವಿದ್ಯಾರ್ಥಿನಿ

ಬಸವಕಲ್ಯಾಣ: ನಾನಿನ್ನು ಓದಬೇಕು ಎಂದರೂ ಮದುವೆ ಮಾಡಲು ಮನೆಯವರು ಮುಂದಾಗಿದ್ದಾರೆ. ಇದನ್ನು ನಿಲ್ಲಿಸಿ ಎಂದು ಬಾಲಕಿಯೊಬ್ಬಳು ಪಾಲಕರ ನಿರ್ಧಾರದ ವಿರುದ್ಧ ಸಹಾಯವಾಣಿಗೆ ಮೊರೆ ಹೋದ ಪ್ರಸಂಗ ಬೆಳಕಿಗೆ ಬಂದಿದೆ. ಮುಡಗಿ ಪೊಲೀಸ್ ಠಾಣಾ ವ್ಯಾಪಿಯ ಹಳ್ಳಿಯೊಂದರ ೧೪ ವರ್ಷದ ಬಾಲಕಿಯೇ ತನ್ನ ಶಿಕ್ಷಣ ಹಕ್ಕು ರಕ್ಷಿಸಿಕೊಳ್ಳುವಲ್ಲಿ ತೋರಿದ ಸಮಯಪ್ರಜ್ಞೆ, ದಿಟ್ಟ ನಡೆ ಮಾದರಿ ಎನಿಸಿದೆ.

೯ನೇ ತರಗತಿ ಓದುವ ಈಕೆ ವಿವಾಹ ಸೋದರ ಮಾವನೊಂದಿಗೆ ಮಾಡಲು ಪಾಲಕರು ತೀರ್ಮಾನಿಸಿ ಪರಸ್ಪರ ಬಂದು ನೋಡುವ ಶಾಸ್ತç ಮುಗಿಸಿದ್ದರು. ನಿಶ್ವಿತಾರ್ಥ ಸಿದ್ಧತೆ ಮಾತುಕತೆ ಹಂತ ತಲುಪಿತ್ತು.

ಮನೆಯಲ್ಲಿನ ಬೆಳವಣಿಗೆ ಗಮನಿಸಿದ ಬಾಲಕಿ, ಮದುವೆ ಆಗಲು ಮನಸ್ಸಿಲ್ಲ. ಎಲ್ಲರಂತೆ ಓದಬೇಕು. ಮದುವೆ ಮಾಡಬೇಡಿ. ಓದಲು ಅವಕಾಶ ಮಾಡಿಕೊಡಿ ಎಂದು ಪಾಲಕರಲ್ಲಿ ಕೇಳಿಕೊಂಡಿದ್ದರೂ ತಲೆಕೆಡಿಸಿಕೊಳ್ಳದೆ ವಿವಾಹದ ನಿರ್ಧಾರಕ್ಕೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕರೆ ಮಾಡಿದ್ದಾಳೆ.

ತಕ್ಷಣ ಕಾರ್ಯಪ್ರವೃತ್ತಗೊಂಡ ಘಟಕ ಗುರುವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ, ತಹಸೀಲ್ದಾರ್ ದತ್ತಾತ್ರೇಯ ಗಾದಾ, ತಾಪಂ ಇಒ ರಮೇಶ ಸುಲ್ಫಿ, ಸಿಡಿಪಿಒ ಗೌತಮ ಶಿಂಧೆ, ಪಿಎಸ್‌ಐ ಜಯಶ್ರೀ ಹೊಡಲ್, ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಸಂಯೋಜಕ, ತಾಲೂಕು ಸಂಯೋಜಕ ವಿನೋದ ಕುರಿ ನೇತೃತ್ವದ ತಂಡ ಮನೆಗೆ ಭೇಟಿ ನೀಡಿ ಬಾಲಕಿ ಧೈರ್ಯವನ್ನು ಮೆಚ್ಚಿ ಸನ್ಮಾನಿಸಿದರು. ಬಳಿಕ ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ. ಬಾಲಕಿ ವಯಸ್ಸು ೧೮ ವರ್ಷವಾಗುವವರೆಗೆ ಮದುವೆ ಮಾಡಬಾರದು ಎಂದು ಪಾಲಕರ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.