ಜಿಲ್ಲೆ

ಮಕ್ಕಳ ಪ್ರತಿಭೆ ಗುರುತಿಸಲು ವೇದಿಕೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕುಮಾರ ಸಿಂದಗಿ ಹೇಳಿದರು.
ಗುಲಗಂಜಿಕೊಪ್ಪದ ಸಮೂಹ ಸಂಪನ್ಮೂಲ ಕೇಂದ್ರ, ಶ್ರೀ ಚನ್ನಕೇಶವ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಶ್ರೀ ಮೃತ್ಯುಂಜಯ ಪ್ರೌಢಶಾಲೆ ಸಹಯೋಗದಲ್ಲಿ ಶಾಲೆಯಲ್ಲಿ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಅನಾವರಣ ಮಾಡುವ ಮೂಲಕ ಮಕ್ಕಳು ಸರ್ವಾಂಗೀಣ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸಬೇಕು. ಸೋಲು, ಗೆಲುವಿನ ಬಗ್ಗೆ ಯೋಚಿಸದೆ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದರು.
ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಚನ್ನಕೇಶವ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಶಿವನಗೌಡ ಟೋಪಣ್ಣವರ, ಎಂ.ವಿ. ಅಡಿವೇರ, ಬಸವರಾಜ ಚಿಕ್ಕೋರ, ಎಫ್​.ಕೆ. ಅಸುಂಡಿ, ಎನ್​.ಎಸ್​. ಕಡಕೋಳ, ಎಂ.ವೈ. ರಾಯನಗೌಡ್ರ, ಕಸ್ತೂರಿ ರಾಯನಗೌಡ್ರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುರೇಶ ಮೊರಬದ, ಇತರರು ಇದ್ದರು.
ಸುಮಾರು 30 ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದರು. ಸವಿತಾ ಕರಣಿ ಸ್ವಾಗತಿಸಿದರು. ಶೈಲಾ ಕೋಟಿ ನಿರೂಪಿಸಿದರು. ಅಲ್ಲಮಪ್ರಭು ಮಟ್ಟಿ ವಂದಿಸಿದರು.