ಮಂಡ್ಯ: ಮಕ್ಕಳಿಗೆ ಹೆಚ್ಚು ಮಾತನಾಡಲು ಅವಕಾಶ ಕಲ್ಪಿಸಿ ಕೊಡುವುದು ಶಿಕ್ಷಣದ ಒಂದು ಅಂಶ ಎಂದು ಡಯಟ್ ಕಾಲೇಜಿನ ಪ್ರಾಂಶುಪಾಲ ಎಂ.ಶಿವಮಾದಪ್ಪ ಹೇಳಿದರು.
ನಗರದ ವೆಬ್‌ಸೆಟಿ ಸಭಾಂಗಣದಲ್ಲಿ ಯುನಿಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಮತ್ತು ಭೀಮ್ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಸಂಸತ್-2022ರ ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಲವು ವರ್ಷಗಳಿಂದ ಮಕ್ಕಳ ಗ್ರಾಮ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಸಾಕ್ರಟಿಸ್ ಒಂದು ಮಾತು ಹೇಳುತ್ತಾರೆ. ‘ಏನಾದರು ಆಗಲಿ ಮೊದಲು ಪ್ರಶ್ನೆಯನ್ನು ಮಾಡಿ’ ಎಂದು. ಪ್ರಶ್ನೆ ಮಾಡುವುದರಿಂದ ಆ ಕೆಲಸದ ಉದ್ದೇಶ ರೀತಿ ನೀತಿ ತಿಳಿಯುತ್ತದೆ. ಆ ಉದ್ದೇಶದಿಂದ ಅವರು ಈ ಮಾತನ್ನು ಹೇಳಿದ್ದಾರೆ. ವಿಷವನ್ನು ಅರ್ಥ ಮಾಡಿಕೊಳ್ಳಲು ಪ್ರಶ್ನೆಗಳನ್ನು ಮಾಡಬೇಕಿದೆ ಎಂದು ತಿಳಿಸಿದರು.
ಬರ್ಡ್ಸ್ ಸಂಸ್ಥೆಯ ನಿರ್ದೇಶಕ ಮಿಕ್ಕೆರೆ ವೆಂಕಟೇಶ್ ಮಾತನಾಡಿ, ಜಿಲ್ಲೆಯ ಎಲ್ಲ ಮಕ್ಕಳ ಪರವಾಗಿ ಮಕ್ಕಳ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಜತೆ ಚರ್ಚಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಪ್ರತಿ ಜಿಲ್ಲೆಯಿಂದ ಒಂದು ಹೆಣ್ಣು ಮಗು ಹಾಗೂ ಒಂದು ಗಂಡು ಮಗುವನ್ನು ಆಯ್ಕೆಮಾಡಿ, ಆ ಮಕ್ಕಳು ಮುಖ್ಯಮಂತ್ರಿಗಳೊಂದಿಗೆ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳ ಕುರಿತು ಪ್ರಶ್ನೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.
ಸಿಡಿಪಿಒ ಎಚ್.ಕೆ.ಕುಮಾರಸ್ವಾಮಿ, ಸಂಯೋಜಕಿ ಶೋಭಾವತಿ, ಮಕ್ಕಳ ಸಹಾಯವಾಣಿಯ ಸದಸ್ಯರಾದ ಸುಜಾತಾ, ಅನುಪಮಾ, ಸಿಂಚನಾ, ಶಿಕ್ಷಣ ಸಂಯೋಜಕರಾದ ಮಧುಸೂದನ್ ಹಾಜರಿದ್ದರು.