ಹುಣಸೂರು: ನಗರದ ಟ್ಯಾಲೆಂಟ್ ಶಿಕ್ಷಣ ಸಂಸ್ಥೆಯ ಕುವೆಂಪು ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿ.4 ಮತ್ತು 5ರಂದು ಜಿಲ್ಲಾಮಟ್ಟದ ಮೂರನೇ ವರ್ಷದ ಸಮ್ಮೇಳನ ಆಯೋಜಿಸಲಾಗಿದೆ.
ಶಾಲಾ ಆವರಣದಲ್ಲಿ ಆಯೋಜನೆಗೊಂಡಿರುವ ಸಮ್ಮೇಳನವನ್ನು ಡಿ.4ರಂದು ಬೆಳಗ್ಗೆ 9 ಗಂಟೆಗೆ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಉದ್ಘಾಟಿಸುವರು. ಸಂಸ್ಥೆಯ ಅಧ್ಯಕ್ಷ ನಾರಾಯಣ್ ರೈ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಧ್ವಜಾರೋಹಣ ನೆರವೇರಿಸುವರು. ಕಾಂತಾರ ಚಿತ್ರದ ನಟಿ ಮಾನಸಿ ಸುಧೀರ್, ತಾಲೂಕು ಕಸಾಪ ಅಧ್ಯಕ್ಷ ಹರವೆ ಮಹದೇವ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ಭಾಗವಹಿಸಲಿದ್ದಾರೆ. ಟ್ಯಾಲೆಂಟ್ ವಿದ್ಯಾಸಂಸ್ಥೆಯ ಕುವೆಂಪು ಮಕ್ಕಳ ಕಸಾಪ ಘಟಕದ ಅಧ್ಯಕ್ಷೆ, ದ್ವಿತೀಯ ಪಿಯು ವಿದ್ಯಾರ್ಥಿನಿ ಗಾನವಿ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಾಂಶುಪಾಲ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 8.30ಕ್ಕೆ ನಗರದ ಸಂವಿಧಾನ ವೃತ್ತದಿಂದ ಕನ್ನಡ ಸಾಹಿತ್ಯ ರಥದೊಂದಿಗೆ ಪೂರ್ಣಕುಂಭ ಕಳಸ, ಕಲಾ ತಂಡಗಳೊಂದಿಗೆ ಪ್ರಮುಖ ರಸ್ತೆಗಳ ಮೂಲಕ ಶಾಲೆಯವರೆಗೆ ಮೆರವಣಿಗೆ ಆಯೋಜಿಸಲಾಗಿದೆ. 11.30ಕ್ಕೆ ಕವಿಗೋಷ್ಠಿ, ಸ್ವರಚಿತ ಕವನ ವಾಚನ, 1.30ಕ್ಕೆ ಭರತನಾಟ್ಯ, 3.30ಕ್ಕೆ ಜಾನಪದ ಗೀತಗಾಯನ ನಡೆಯಲಿದೆ. ಡಿ.5ರಂದು ಬೆಳಗ್ಗೆ 9.30ಕ್ಕೆ ಹಿರಿಯ ಪತ್ರಕರ್ತ ದಿವಂಗತ ರಾಜಶೇಖರಕೋಟಿ ಸ್ಮರಣಾರ್ಥ, ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿ ವೃತ್ತ ಪತ್ರಿಕೆಗಳು ವಿಷಯದ ಕುರಿತಾಗಿ ವಿಚಾರಗೋಷ್ಠಿ, 11.30ಕ್ಕೆ ಮಂಕುತಿಮ್ಮನ ಕಗ್ಗ ವಾಚನ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಎಚ್.ಎನ್.ಗಿರೀಶ್, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹನಗೋಡು ನಟರಾಜ್ ಮತ್ತು ಕುಮಾರ್ ಅರಸೇಗೌಡ ಅವರಿಗೆ ಸನ್ಮಾನ ಆಯೋಜಿಸಲಾಗಿದೆ.