ಜಿಲ್ಲೆ

ಗ್ರಾಮಸಭೆಯಲ್ಲಿ ಸಮಸ್ಯೆಗಳನ್ನು ತೆರೆದಿಟ್ಟ ಮಕ್ಕಳು

ಎ. ಆರ್. ರಘುರಾಮ

ಶನಿವಾರಸಂತೆ : ಹಂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾ.ಪಂ.ವ್ಯಾಪ್ತಿಯ ಮಕ್ಕಳ ಗ್ರಾಮಸಭೆಯಲ್ಲಿ ಶಾಲೆಗಳ ಮೂಲ ಅಗತ್ಯಗಳು ಮತ್ತು ಬೇಡಿಕೆಗಳ ಬಗ್ಗೆ ವಿದ್ಯಾರ್ಥಿಗಳೇ ಗಮನ ಸೆಳೆದದ್ದು ವಿಶೇಷವಾಗಿತ್ತು.

ವಿದ್ಯಾರ್ಥಿನಿ ಕೆ.ಸೃಷ್ಟಿ ಮತ್ತು ಗ್ರಾ.ಪಂ.ಅಧ್ಯಕ್ಷೆ ಸುಧಾ ಈರೇಶ್ ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಂಡ್ಲಿ ಗ್ರಾ.ಪಂ.ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಚಟುವಟಿಕೆಯಿಂದಲೇ ಭಾಗವಹಿಸಿದ್ದರು. ಹಂಡ್ಲಿ ಪ್ರಾಥಮಿಕ ಶಾಲೆಗೆ ಉದ್ಯಾನವನ ನಿರ್ಮಿಸುವುದು ಶಾಲಾ ಕೊಠಡಿಗಳಿಗೆ ಸುಣ್ಣ, ಬಣ್ಣ ಬಳಿಯುವುದು. ಶಾಲೆಗೆ ವಿಜ್ಞಾನ ಪ್ರಯೋಗಾಲಯದ ವ್ಯವಸ್ಥೆ ಮಾಡಿಕೊಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದು ಅಧಿಕಾರಿಗಳ ಮತ್ತು ಜನ ಪ್ರತಿನಿಧಿಗಳ ಗಮನ ಸೆಳೆಯಿತು. ಮೂದರಳ್ಳಿ ಶಾಲೆಯಲ್ಲಿ ಬಿಸಿಯೂಟ ಮಾಡಲು ಪ್ರತ್ಯೇಕ ಹಾಲ್ ನಿರ್ಮಿಸಿಕೊಡುವಂತೆ ವಿದ್ಯಾರ್ಥಿಯೊಬ್ಬ ಮನವಿ ಮಾಡಿದ. ಕಿತ್ತೂರು ಶಾಲೆಯಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವಂತೆ ಬಾಲಕಿ ಮಾಡಿದ ಮನವಿಯು ತುರ್ತು ಅಗತ್ಯವನ್ನು ಬಿಂಬಿಸಿತು.

ಗ್ರಂಥಾಲಯಕ್ಕೆ ಪುಸ್ತಕ ಕೊಡಿಸಿ:

ಹಂಡ್ಲಿ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಮತ್ತಷ್ಟು ಪುಸ್ತಕಗಳನ್ನು ಕೊಡಿಸುವಂತೆ ವಿದ್ಯಾರ್ಥಿನಿಯೊಬ್ಬಳು ಬೇಡಿಕೆ ಇಟ್ಟಳು. ಹಂಡ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ವ್ಯವಸ್ಥೆ ಇದ್ದರೂ ಇಂಟರ್ ನೆಟ್ ವ್ಯವಸ್ಥೆ ಇಲ್ಲ. ಇದನ್ನು ಕಲ್ಪಿಸಿಕೊಡುವಂತೆ ಶಾಲಾ ವಿದ್ಯಾರ್ಥಿನಿ ಒತ್ತಾಯಿಸಿದಳು. ಹಂಡ್ಲಿ ಅಂಗನವಾಡಿ ಕೇಂದ್ರದ ಪುಟ್ಟ ಬಾಲಕನೊಬ್ಬ ತನ್ನದೆ ರೀತಿಯಲ್ಲಿ ಸಮಸ್ಯೆಯನ್ನು ತೆರೆದಿಟ್ಟು ಗಮನಸೆಳೆದ. ಅಂಗನವಾಡಿಗೆ ಆಟ ಆಡಲು ಜಾರುಬಂಡಿ, ಜೋಕಾಲಿ ತಂದಿದ್ದಾರೆ. ಆದರೆ, ಅದನ್ನು ಇನ್ನೂ ಅಳವಡಿಸಿಲ್ಲ. ಅದರಲ್ಲಿ ನಮಗೆ ಆಟ ಆಡಲು ಆಗುತ್ತಿಲ್ಲ ಎಂದು ಮುದ್ದು ಮುದ್ದಾಗಿ ಸಮಸ್ಯೆಗಳನ್ನು ವಿವರಿಸಿದ.

ತ್ಯಾಜ್ಯಗಳನ್ನು ನಾವೇ ವಿಲೇವಾರಿ ಮಾಡಬೇಕಿದೆ:

ಶಾಲೆಯ ಅನೈರ್ಮಲ್ಯದ ಸಮಸ್ಯೆ ಬಗ್ಗೆ ಬಹಳಷ್ಟು ಮಕ್ಕಳು ಪ್ರಸ್ತಾಪಿಸಿದರು. ರಾತ್ರಿಯಲ್ಲಿ ಪುಂಡರು ಶಾಲಾ ಆವರಣಕ್ಕೆ ಪ್ರವೇಶಿಸಿ ಮದ್ಯದ ಬಾಟಲಿ, ಸಿಗರೇಟ್ ಪ್ಯಾಕ್ ಮುಂತಾದ ತ್ಯಾಜ್ಯ ವಸ್ತುಗಳನ್ನು ಬಿಸಾಕಿ ಹೋಗುತ್ತಿದ್ದಾರೆ. ಬೆಳಗ್ಗೆ ನಾವೇ ಅದನ್ನು ಸ್ವಚ್ಛಗೊಳಿಸಬೇಕು. ಇಂಥವರನ್ನು ಪತ್ತೆ ಮಾಡಿ ಕ್ರಮ ಕೈಗೊಳುವಂತೆ ಮಕ್ಕಳು ಒತ್ತಾಯಿಸಿದರು. ಶಾಲೆಯ ಸಮಸ್ಯೆ ಜತೆಗೆ ಪೀಠೋಪಕರಣ, ಕ್ರೀಡಾ ಸಾಮಗ್ರಿಗಳ ಬಗ್ಗೆ ಬೇಡಿಕೆಯನ್ನಿಟ್ಟರು.

ಗಮನಕ್ಕೆ ತರಲಾಗುವುದು: ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾರ್ಥಿನಿ ಸೃಷ್ಟಿ, ಶಾಲೆಗಳಲ್ಲಿರುವ ಸಮಸ್ಯೆಗಳ ಬಗ್ಗೆ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದ ಸ್ವಲ್ಪ ಮಟ್ಟಿಗಾದರೂ ಪರಿಹಾರ ಸಿಗಬಹುದು. ವಿದ್ಯಾರ್ಥಿಗಳಿಂದ ವ್ಯಕ್ತವಾದ ಬೇಡಿಕೆಗಳನ್ನು ನಮ್ಮ ಗ್ರಾ.ಪಂ. ಗಮನಕ್ಕೆ ತರಲಾಗುವುದು ಎಂದರು.

ಗ್ರಾ.ಪಂ.ಅಧ್ಯಕ್ಷೆ ಸುಧಾ ಈರೇಶ್, ಸದಸ್ಯ ವೀರೇಂದ್ರ ಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಾದ ಸಾತ್ವಿಕ್, ಜೀವನ್, ನೂತನ್, ಪಾರ್ವತಿ, ಗ್ರಾ.ಪಂ.ಸದಸ್ಯ ಬಸವರಾಜ್ ಹಾಜರಿದ್ದರು. ಸಭೆಯಲ್ಲಿ ಗ್ರಾ.ಪಂ.ಕಾರ್ಯದರ್ಶಿ ಚಂದ್ರಶೇಖರ್, ಸಿಬ್ಬಂದಿ, ವಿವಿಧ ಶಾಲಾ ಶಿಕ್ಷಕರು, ಅಂಗನವಾಡಿ ಶಿಕ್ಷಕಿಯರು ಹಾಜರಿದ್ದರು.

20ಎಸ್‌ಎಸ್ 1

ಶನಿವಾರಸಂತೆ ಸಮೀಪದ ಹಂಡ್ಲಿಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮಸಭೆಯನ್ನು ಗ್ರಾ.ಪಂ.ಅಧ್ಯಕ್ಷೆ ಸುಧಾ ಮತ್ತು ವಿದ್ಯಾರ್ಥಿನಿ ಸೃಷ್ಟಿ ಉದ್ಘಾಟಿಸಿದರು. ಜೀವನ್, ನೂತನ್, ಪಾರ್ವತಿ, ಬಸವರಾಜ್, ಚಂದ್ರಶೇಖರ್ ಇದ್ದರು.

ಎಸ್‌ಎಸ್2

ಗ್ರಾಮ ಸಭೆಯಲ್ಲಿ ಮಕ್ಕಳು ಪ್ರಶ್ನೆ ಕೇಳುತ್ತಿರುವುದು.

ಎಸ್‌ಎಸ್3 ಮಕ್ಕಳ ಗ್ರಾಮಸಭೆ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿನಿ ಸೃಷ್ಟಿ ಮಾತನಾಡುತ್ತಿರುವುದು.