ಜಿಲ್ಲೆ

ಮಕ್ಕಳ ಹಕ್ಕುಗಳ ರಕ್ಷಣೆಯ ಜೊತೆಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ವಹಿಸಿ: ಶೇಖರಗೌಡ ರಾಮತ್ನಾಳ

Gadag - Shivanand Hiremath

ಗದಗ: ಮಕ್ಕಳ ಹಕ್ಕುಗಳ ರಕ್ಷಣೆಯ ಜೊತೆಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಶುಕ್ರವಾರದಂದು  ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು  ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿ.ಆರ್.ಪಿ, ಮತ್ತು ಸಿ.ಆರ್.ಪಿ., ಸಮಾಜ ಕಲ್ಯಾಣ ಇಲಾಖೆಯ   ಜಿಲ್ಲಾ   ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಯಮಿತವಾಗಿ ಪ್ರತಿ ಗ್ರಾಮ ಪಂಚಾಯತಗಳಲ್ಲಿ ಕಡ್ಡಾಯವಾಗಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಆಯೋಜಿಸಬೇಕು.  ಸಭೆಯಲ್ಲಿ  ಮಕ್ಕಳಿಗೆ ಮೂಲಭೂತ ಸೌಕರ್ಯಗಳ ಒದಗುವಿಕೆ,  ಮಕ್ಕಳು ಶಾಲೆಗೆ ಹಾಜರಾಗಿರುವ ವಿವರ,  ಆರೋಗ್ಯ ತಪಾಸಣೆ ಕುರಿತು ಚರ್ಚೆ ನಡೆಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆಸಮಾಜ ಕಲ್ಯಾಣ, ಪೊಲೀಸ ಇಲಾಖೆ, ವಸತಿ ನಿಲಯದ ಮುಖ್ಯಸ್ಥರು, ಕೆ.ಎಸ್.ಆರ್.ಟಿ.ಸಿ, ಅಧಿಕಾರಿಗಳು ಹಾಜರಿರುವಂತೆ ನೋಡಿಕೊಳ್ಳಬೇಕು.

ಪ್ರತಿ ಶಾಲಾ ಕಟ್ಟಡಗಳ ಹಾಗೂ ಕಂಪೌಂಡ ಮೇಲೆ ಮಕ್ಕಳ ಸಹಾಯವಾಣಿ 1098 ಗೋಡೆ ಬರಹವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.  ಶಾಲೆಗಳಲ್ಲಿ ಮಕ್ಕಳ  ಹಕ್ಕುಗಳ ಕ್ಲಬ್ ರಚನೆ ಮಾಡಬೇಕು.   ಪ್ರತಿಯೊಬ್ಬರು ತಮ್ಮ ವ್ಯಾಪ್ತಿಯಲ್ಲಿ ಮಕ್ಕಳ ಹಕ್ಕುಗಳ ಕುರಿತು ಇರುವ ಕಾನೂನುಗಳ ಅರಿವು ಮೂಡಿಸಬೇಕು. ಯಾವುದೇ ಕಾರಣಕ್ಕೂ  ಮಕ್ಕಳ ಹಕ್ಕುಗಳ  ಸಭೆಗಳನ್ನು ನಿರ್ಲಕ್ಷಿಸಬಾರದು.  ಎಲ್ಲ ಶಾಲೆಗಳಲ್ಲಿಯೂ ಆರ್,ಟಿ.ಇ. ಕಾಯ್ದೆ ಸಂಪೂರ್ಣವಾಗಿ ಸದ್ಭಳಕೆಯಾಗಬೇಕು ಎಂದರು.

ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ದೂರು ಪೆಟ್ಟಿಗೆ  ಇಡಬೇಕು. ದೂರು ಸಲ್ಲಿಸುವ ಮಕ್ಕಳ ಹೆಸರನ್ನು  ಬಹಿರಂಗ ಪಡಿಸದೇ ಗೌಪತ್ಯ ಕಾಪಾಡಿ ಮಕ್ಕಳಿಗಾಗುವ ಶೋಷಣೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಸಾಮಾಜಿಕ ಕಳಕಳಿಯಿಂದ ಕರ್ತವ್ಯ ನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು.  

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮತ್ತೆ ಶಾಲೆಗೆ ಸೇರಿಸುವುದರ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರಬೇಕು. ವಿವಿಧ ಕಾರಣಗಳಿಂದ  ಪಾಲಕರನ್ನು  ಕಳೆದುಕೊಂಡಂತಹ  ಮಕ್ಕಳಿಗೆ  ಬಾಲಕರ, ಬಾಲಕಿಯರ ಮಂದಿರದಲ್ಲಿ  ದಾಖಲಿಸಿ ಅವರಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಲು ಕ್ರಮ ವಹಿಸಬೇಕು.

ಬಾಲ್ಯ ವಿವಾಹಗಳನ್ನು ತಡೆಗಟ್ಟುವುದರ ಜೊತೆಗೆ ಈ ಕುರಿತು ಪ್ರಕರಣ ದಾಖಲಿಸಲು ವಿಳಂಬ ಮಾಡದೇ ಕ್ರಮ ವಹಿಸಬೇಕು. ಶಾಲಾ ಪಠ್ಯಪುಸ್ತಕದ ಕೊನೆಯ ಪುಟದಲ್ಲಿ ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ಪ್ರಕಟಿಸಲು ಪಠ್ಯಪುಸ್ತಕ ರಚನಾ ಸಮಿತಿಯೊಂದಿಗೆ ಆಯೋಗವು ಈಗಾಗಲೇ ಚರ್ಚೆ ನಡೆಸಲಾಗಿದ್ದು ಕ್ರಮ ವಹಿಸಲಾಗುವುದು ಎಂದು ಸಭೆಗೆ ತಿಳಿಸಿದರು.  

ಸಭೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವಿ ಗುಂಜೀಕರ್ , ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಧಾ ಮಣ್ಣೂರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಮಿತ ಬಿದರಿ, ಬಾಲ ನ್ಯಾಯ ಮಂಡಳಿಯ ಸದಸ್ಯ ಜೆ.ಸಿ. ರೇಶ್ಮೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿ.ಆರ್.ಪಿ, ಸಿ.ಆರ್.ಪಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.