ಬೇಲೂರು: ಗಣೇಶ ಹಬ್ಬದ ಅಂಗವಾಗಿ ಗಣೇಶ ಮೂರ್ತಿಗಳನ್ನು ಕೂರಿಸಲು ಅನುಮತಿ ಪಡೆಯುವುದಕ್ಕೆ ಎಲ್ಲೂ ಅಲೆಯದಂತೆ ತಾಲೂಕು ಕಚೇರಿಯಲ್ಲಿ ಏಕಗವಾಕ್ಷಿ ಕೊಠಡಿ ತೆರೆಯಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಣ್ಣಿನಿಂದ ಮಾಡಿದ್ದ ಗಣೇಶ ಮೂರ್ತಿಯನ್ನೇ ಇಟ್ಟು ಪೂಜಿಸಬೇಕು. ಗಣಪತಿ ಇಡುವುದಕ್ಕೆ ವಿವಿಧ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಇಲಾಖೆಗಳಿಗೆ ಅಲೆಯುವ ಬದಲು ತಾಲೂಕು ಕಚೇರಿಯಲ್ಲಿ ಏಕ ಗವಾಕ್ಷಿ ಕೊಠಡಿ ತೆರೆದಿದ್ದು, ಗಣಪತಿ ಸಮಿತಿಯವರು ಇಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಖುದ್ದಾಗಿ ಇರುವುದರಿಂದ ಇಲ್ಲಿಯೇ ಅನುಮತಿ ಪಡೆಯಬಹುದು. ಅನುಮತಿಯಲ್ಲಿ ಲೋಪವಿದ್ದಲ್ಲಿ ಇಲ್ಲಿಯೇ ಸರಿಪಡಿಸಬಹುದಾಗಿದೆ. ಅಲ್ಲದೆ ಗಣಪತಿ ಬಿಡುವಾಗ ಹೂವುಗಳನ್ನೆಲ್ಲ ಒಂದೆಡೆ ಹಾಕಬೇಕು. ಕೆರೆ ನದಿಗಳಲ್ಲಿ ಹಾಕಬಾರದು, ಸಾರ್ವಜನಿಕರಿಗೆ ತೊಂದರೆ ಕೊಡುವ ಕೆಲಸ ಮಾಡಬಾರದು, ಈ ಬಾರಿ ಕೆಲವು ನಿಬಂಧನೆಗಳಿದ್ದು ಅದನ್ನು ಪಾಲಿಸಬೇಕು ಎಂದು ಹೇಳಿದರು.
ಪಿಎಸ್‌ಐ ಶಿವನಗೌಡ ಪಾಟೀಲ್, ಸೆಸ್ಕ್ ಎಇಇ ಬಸವರಾಜು, ಶಿರಸ್ತೆದಾರ್ ರಂಗಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ತಾಲೂಕು ಕಚೇರಿ ಸಿಬ್ಬಂದಿ ಇದ್ದರು.