ಜಿಲ್ಲೆ

ವಸತಿ ಶಾಲೆಯನ್ನು ಸದುಪಯೋಗಪಡಿಸಿಕೊಳ್ಳಿ

ಗುಂಡ್ಲುಪೇಟೆ: ಬುಡಕಟ್ಟು ಹಾಗೂ ಗಿರಿಜನರ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ವಸತಿ ಶಾಲೆಯನ್ನು ನಿರ್ಮಿಸಿದ್ದು, ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ತಾಲೂಕಿನ ನಾಗಾಪಟ್ಟಣ ಕಾಲನಿಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಿಸಿದ ಆದಿವಾಸಿ ಬುಡಕಟ್ಟು ಜನಾಂಗದ ಮಕ್ಕಳ ಆಶ್ರಮ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾಡಂಚಿನ ಹಾಡಿ ಪೋಡುಗಳಲ್ಲಿ ನೆಲೆಸಿರುವ ಬುಡಕಟ್ಟು ಹಾಗೂ ಗಿರಿಜನರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತೆ ಮಾಡಲು ಸರ್ಕಾರ ವಸತಿ ಶಾಲೆ ನಿರ್ಮಿಸಿದ್ದು, ಹೆಚ್ಚಿನ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ ಮಾತನಾಡಿ, ಕಾಡಂಚಿನ ಹಾಡಿ ಪೋಡುಗಳ ಮಕ್ಕಳಿಗೆ ಶಾಲೆ ತೆರೆದು ಶಿಕ್ಷಣ ದೊರಕುವಂತೆ ಮಾಡುವುದು ಕಷ್ಟವಾಗಿದ್ದರಿಂದ ಅರಣ್ಯವಾಸಿಗಳ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತೆ ಮಾಡಲು ಸರ್ಕಾರ ಸುಸಜ್ಜಿತ ಕಟ್ಟಡದಲ್ಲಿ ಆಶ್ರಮ ಶಾಲೆಗಳನ್ನು ತೆರೆದಿದೆ. ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಶಿಕ್ಷಣ ಜತೆಗೆ ವಸತಿ ಸೌಲಭ್ಯವಿದ್ದು ಬುಡಕಟ್ಟು ಹಾಗೂ ಗಿರಿಜನರು ತಮ್ಮ ಮಕ್ಕಳನ್ನು ಇಲ್ಲಿಗೆ ದಾಖಲಿಸುವ ಮೂಲಕ ಉತ್ತಮ ಶಿಕ್ಷಣ ದೊರಕಿಸಬೇಕು ಎಂದು ಕೋರಿದರು.

ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್.ಮಹೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಕಲಾವತಿ, ಮುಖಂಡರಾದ ಸ್ವಾಮಿ, ಮನು. ಲಿಂಗಪ್ಪ, ಮುದ್ದಯ್ಯ ಹಾಗೂ ಇತರರು ಇದ್ದರು.