ಜಿಲ್ಲೆ

ಕಾಲುಬಾಯಿ ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಿ

ಮಡಿಕೇರಿ: ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಸೆ.೨೬ ರಿಂದ ಅ.೨೫ ರವರೆಗೆ ನಾಲ್ಕನೇ ಸುತ್ತಿನಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ನೀಡಲಾಗುತ್ತಿದ್ದು, ಈ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮ ಸಂಬಂಧ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸರ್ಕಾರ ೨೦೩೦ ರೊಳಗೆ ಜಾನುವಾರುಗಳ ಕಾಲುಬಾಯಿ ಜ್ವರವನ್ನು ನಿಯಂತ್ರಿಸುವಲ್ಲಿ ಹಲವು ಸುತ್ತಿನ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಕೋರಿದರು.


ಕೃಷಿಗೆ ಪೂರಕವಾಗಿ ಜಾನುವಾರು ಸಾಕಾಣಿಕೆ ರೈತರ ಅವಿಭಾಜ್ಯ ಅಂಗವಾಗಿದೆ. ಆರ್ಥಿಕ ಚಟುವಟಿಕೆಗೆ ಪಶುಪಾಲನೆ ಸಹಕಾರಿಯಾಗಿದೆ. ಆ ಹಿನ್ನೆಲೆಯಲ್ಲಿ ಜಾನುವಾರು/ ರಾಸುಗಳಿಗೆ ಯಾವುದೇ ರೀತಿಯ ರೋಗ ಬರದಂತೆ ನಿಯಂತ್ರಿಸುವುದು ಅತ್ಯಗತ್ಯವಾಗಿದ್ದು, ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.


ಯಾವುದೇ ಜಾನುವಾರುಗಳು ಲಸಿಕಾ ಕಾರ್ಯಕ್ರಮದಿಂದ ಬಿಟ್ಟು ಹೋಗದಂತೆ ಗಮನಹರಿಸಬೇಕು. ಯಾವ ದಿನದಂದು ಯಾವ ಗ್ರಾಮದಲ್ಲಿ ಲಸಿಕೆ ನೀಡಲಾಗುತ್ತದೆ ಎಂಬ ಬಗ್ಗೆ ಮುಂಚಿತವಾಗಿ ಪ್ರಚುರಪಡಿಸಬೇಕು ಎಂದು ಸಲಹೆ ಮಾಡಿದರು.


ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಲಿಂಗರಾಜು ದೊಡ್ಡಮನಿ ಮಾತನಾಡಿ, ಮೂರನೇ ಸುತ್ತಿನ ಲಸಿಕಾ ಕಾರ್ಯಕ್ರಮದ ಸಂದರ್ಭದಲ್ಲಿ ೭೬,೯೨೦ ಜಾನುವಾರು ಸಂಖ್ಯೆ ಗುರಿಯಲ್ಲಿ ೬೬,೭೧೦ ಜಾನುವಾರುಗಳಿಗೆ ಲಸಿಕೆಯನ್ನು ನೀಡಿ ಶೇ.೮೪ ರಷ್ಟು ಪ್ರಗತಿ ಸಾಧಿಸಲಾಗಿದೆ. ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಸಂಬಂಧಿಸಿದಂತೆ ಲಸಿಕೆ ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ೨ ಎಂ.ಎಲ್.ಒಳಗೊಂಡ ೭೫,೩೨೫ ಸಿರೀಂಜ್‌ಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಪಶುಪಾಲನಾ ಇಲಾಖೆಯ ಮೂರು ಸಂಚಾರಿ ಪಶು ಚಿಕಿತ್ಸಾ ವಾಹನಗಳು ಹಾಗೂ ೮ ಹಾಲು ಉತ್ಪಾದಕರ ಮಹಾ ಮಂಡಳದ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.


ಈಗಾಗಲೇ ಪಶುಪಾಲನಾ ಇಲಾಖೆಯ ಆಯುಕ್ತಾಲಯದಿಂದ ೭೭ ಸಾವಿರ ಡೋಸ್ ಲಸಿಕೆ ಸರಬರಾಜು ಆಗಿದೆ. ಒಂದು ವಾಕ್ ಇನ್ ಕೂಲರ್, ೭ ಐಸ್ ಲೈನ್ ರೆಫ್ರಿಜರೇಟರ್, ೫ ಐಎಲ್ ಆರ್‌ಎಫ್, ೪೭ ಶೀತಲೀಕರಣಯಂತ್ರ ಹಾಗೂ ೧೮೨ ವ್ಯಾಕ್ಸಿನ್ ಕ್ಯಾರಿಯರ್ ಗಳನ್ನು ಸುಸ್ಥಿತಿಯಲ್ಲಿ ಇಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಲಸಿಕೆ ಅನುಷ್ಠಾನ ಸಂಬಂಧಿಸಿದಂತೆ ೧೪ ತಾಂತ್ರಿಕ ಸಿಬ್ಬಂದಿ, ೩೩ ಅರೆ ತಾಂತ್ರಿಕ ಸಿಬ್ಬಂದಿ, ೦೯ ಇಲಾಖಾ ಡಿ ದರ್ಜೆ ಸಿಬ್ಬಂದಿ, ೧೨ ಬಾಹ್ಯ ಮೂಲದ ಡಿ ದರ್ಜೆ ಸಿಬ್ಬಂದಿ, ೪ ಹೆಚ್ಚುವರಿ ಸಿಬ್ಬಂದಿ ಒಟ್ಟು ೭೨ ಲಸಿಕಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪಾಲಿಕ್ಲೀನಿಕ್ ಉಪ ನಿರ್ದೇಶಕ ಡಾ.ತಿಮ್ಮಯ್ಯ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಸನ್ನ(ಮಡಿಕೇರಿ), ಡಾ.ಶಾಂತೇಶ್(ಪೊನ್ನಂಪೇಟೆ), ಡಾ.ನವೀನ್(ವಿರಾಜಪೇಟೆ), ಡಾ.ಬಾದಾಮಿ(ಸೋಮವಾರಪೇಟೆ), ಡಾ.ಶ್ರೀದೇವು(ಕುಶಾಲನಗರ), ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಬಿ.ಎಲ್.ಪ್ರಸನ್ನ ಇತರರು ಹಲವು ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗಾಗಿ
ಹೆಚ್ಚಿನ ಮಾಹಿತಿಗೆ ತಾಲೂಕಿನ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಮಡಿಕೇರಿ ೯೪೪೮೬೪೭೨೭೬, ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ಸೋಮವಾರಪೇಟೆ ೯೪೪೮೬೫೫೬೬೦, ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ವಿರಾಜಪೇಟೆ ೯೧೪೧೦೯೩೯೯೬, ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ಕುಶಾಲನಗರ ೮೯೫೧೪೦೪೦೨೫, ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ಪೊನ್ನಂಪೇಟೆ ೯೪೪೯೦೮೧೩೪೩ ನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಲಿಂಗರಾಜು ದೊಡ್ಡಮನಿ ತಿಳಿಸಿದರು.