ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವ ಜತೆಗೆ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಸೂಚಿಸಿದರು.
ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ನಂ.49ರ ಲಕ್ಷ್ಮೀಪುರಂ, ಚಾಮರಾಜಪುರಂ ಟೆನಿಸ್ ಕೋರ್ಟ್ ಮುಂಭಾಗದಿಂದ ಬಲ್ಲಾಳ ಸರ್ಕಲ್ ವೃತ್ತ ಸೇರುವ ನರಸರಾಜ ಮಾರ್ಗದ ರಸ್ತೆ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಆರಂಭಿಸಿ ಮೂರು ತಿಂಗಳು ಕಳೆದರೂ ಹಾಗೆಯೇ ಬಿಟ್ಟಿರುವುದರಿಂದ ಓಡಾಡಲು ತೊಂದರೆಯಾಗಿದೆ. ಜಲ್ಲಿಕಲ್ಲುಗಳನ್ನು ಹಾಕಿ ಸುಮ್ಮನೆ ಬಿಟ್ಟಿರುವ ಕಾರಣ ವಾಹನಗಳು ಓಡಾಡಲು ಸಮಸ್ಯೆಯಾಗಿದೆ. ತಕ್ಷಣವೇ ಕಾಮಗಾರಿಯನ್ನುಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ಮಾಡುವಾಗ ಯಾವುದೇ ಕಳಪೆ ಇಲ್ಲದೆ ಗುಣಮಟ್ಟದಿಂದ ಇರಬೇಕು ಎಂದು ಸಲಹೆ ನೀಡಿದರು. ನಗರಪಾಲಿಕೆ ನಾಮ ನಿರ್ದೇಶಿತ ಮಾಜಿ ಸದಸ್ಯರಾದ ಕೆ.ಜೆ.ರಮೇಶ್, ಪಿ.ಟಿ.ಕೃಷ್ಣ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಯಶಂಕರ್, ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸೋಮಸುಂದರ್, ಮಾಧ್ಯಮ ಸಹ ಸಂಚಾಲಕ ಪ್ರದೀಪ್ ಕುಮಾರ್ ಇದ್ದರು.