ರಾವಂದೂರು: ಕಳೆದ ಬಾರಿಗಿಂತಲೂ ಈ ಬಾರಿ ರಾಗಿಗೆ ರಾಜ್ಯ ಸರ್ಕಾರವು ಹೆಚ್ಚು ಬೆಂಬಲ ಬೆಲೆ ಸೂಚಿಸಿರುವುದರಿಂದ ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ತಿಳಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕು ರಾವಂದೂರು ಹೋಬಳಿ ಕೇಂದ್ರದಲ್ಲಿ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ರೈತರು ಬೆಳೆದ ಆಹಾರ ಪದಾರ್ಥಗಳ ಸೇವನೆ ಮಾಡಿ ಪ್ರತಿಯೊಬ್ಬರೂ ಬದುಕುತ್ತಿದ್ದಾರೆ. ಇದನ್ನು ಯಾರೊಬ್ಬರೂ ಮರೆಯಬಾರದು. ರೈತರನ್ನು ಗೌರವಿಸುವ ಮೂಲಕ ಅವರಿಗೆ ಕೃತಜ್ಞತೆಯಿಂದ ನಾವೆಲ್ಲರೂ ಇರಬೇಕು. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ರೈತರಿಗೆ ಮಾನ್ಯತೆ ನೀಡಿದೆ. ಜತೆಗೆ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಂಬಲ ನೀಡಲು ಮುಂದಾಗಿದೆ. ಇದನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು. ಜತೆಗೆ ಇಲಾಖೆ ಅಧಿಕಾರಿಗಳು ರೈತರಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಕೃಷಿ ಮಾರಾಟ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರಾದ ಸೋಮಯ್ಯ ಮಾತನಾಡಿ, ಸರ್ಕಾರ ಪ್ರಸ್ತುತ ಕ್ವಿಂಟಾಲ್ ರಾಗಿಗೆ 4,290 ರೂ. ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸುತ್ತಿದೆ. ಪ್ರಸ್ತುತ ತಾಲೂಕಿನಲ್ಲಿ 16,609 ರೈತರು ನೋಂದಣಿ ಮಾಡಿಸಿದ್ದು, 2,50,835 ಕ್ವಿಂಟಾಲ್ ರಾಗಿ ಖರೀದಿಯ ನಿರೀಕ್ಷೆಯಿದೆ. ನೋಂದಣಿ ಮಾಡಿಸಿರುವ ರೈತರೇ ರಾಗಿ ಮಾರಾಟ ಕೇಂದ್ರಕ್ಕೆ ಬಂದು ಮಾರಾಟ ಮಾಡಬೇಕು ಎಂದರು.
ತಹಸೀಲ್ದಾರ್ ನಿಸರ್ಗ ಪ್ರಿಯಾ ಮಾತನಾಡಿ. ರೈತರು ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರುವ ಮೂಲಕ ಸರ್ಕಾರ ನಿಗದಿಪಡಿಸಿರುವ ಉತ್ತಮ ಬೆಲೆ ಪಡೆದುಕೊಳ್ಳಬೇಕು. ರೈತರು ಯಾವುದೇ ಗೊಂದಲವಿಲ್ಲದೆ ಸರ್ಕಾರದ ನಿಯಮದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ನಿರೀಕ್ಷಕ ಮಂಜುನಾಥ್, ರಾಗಿ ಕೇಂದ್ರದ ಆಧಿಕಾರಿ ಮಂಜುನಾಥ್, ಮಲೆ ಮಾದೇಶ್ವರ ಬೆಟ್ಟದ ಪ್ರಾಧಿಕಾರದ ನಿರ್ದೇಶಕ ಕುಮಾರ್ ವಿಜಯ್, ಜಿ.ಪಂ. ಮಾಜಿ ಸದಸ್ಯ ಎಸ್.ಟಿ.ರಾಜಶೇಖರ್, ಎಪಿಎಂಸಿ ಮಾಜಿ ನಿರ್ದೇಶಕ ಅಪ್ಪಾಜಿಗೌಡ , ಚಂದ್ರೇಗೌಡ, ಡಿ.ಎಸ್.ನಂದೀಶ್, ಡಾ.ಶಂಕರ್, ಮಂಜುನಾಥ್, ಸಚಿವರ ಆಪ್ತ ಕಾರ್ಯದರ್ಶಿ ಮಹೇಂದ್ರ ಇತರರಿದ್ದರು.