ಮದ್ದೂರು ಪಟ್ಟಣದ ಶಿವಪುರದ ಪೂರ್ಣಪ್ರಜ್ಞಾ ಶಾಲೆಯಲ್ಲಿ ಆಹಾರ ಮೇಳ ನಡೆಯಿತು. ಪಿ.ಕಸ್ತೂರಿ, ಎಚ್.ಆರ್.ಅನಂತೇಗೌಡ, ಸೌಭಾಗ್ಯಮ್ಮ ಮಹಾದೇವು, ಸೀನಯ್ಯ, ಗುರುಲಿಂಗಯ್ಯ, ರಮೇಶ್ ಇದ್ದರು.  
ಜಿಲ್ಲೆ

ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನದ ಅರಿವು ಮೂಡಿಸಿ

ಮದ್ದೂರು : ಸಾಮಾನ್ಯ ಜ್ಞಾನಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ವಿದ್ಯಾರ್ಥಿಗಳಿಗೆ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ ತಿಳಿಸಿದರು.

ಪಟ್ಟಣದ ಶಿವಪುರದ ಪೂರ್ಣಪ್ರಜ್ಞಾ ಶಾಲೆಯಲ್ಲಿ ನೂತನ ವರ್ಷದ ಅಂಗವಾಗಿ ಬುಧವಾರ ಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ಆಹಾರ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲೆಗಳಲ್ಲಿ ಈ ರೀತಿಯ ಆಹಾರ ಮೇಳಗಳನ್ನು ಮಾಡುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಈ ಹಲವು ರೀತಿಯ ಕಾರ್ಯಕ್ರಮಗಳನ್ನು ಪೂರ್ಣಪ್ರಜ್ಞಾ ಶಾಲೆಯವರು ಮಾಡಿಕೊಂಡು ಬರುತ್ತಿರುವುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳೆವಣಿಗೆಗೆ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಅಧ್ಯಕ್ಷೆ ಪಿ.ಕಸ್ತೂರಿ ಮಾತನಾಡಿ, ಶಾಲೆಯ 30ಕ್ಕೂ ಹೆಚ್ಚು ಶಾಲಾ ವಿಭಾಗಗಳ ಕೊಠಡಿಗಳಲ್ಲಿ ಶಿಕ್ಷಕರು ತಮ್ಮ ಮನೆಯಲ್ಲಿ ರುಚಿಯಾದ ಹಾಗೂ ಶುಚಿಯಾದ ಪುಳಿಯೋಗರೆ, ಚಿತ್ರಾನ್ನ, ವಾಂಗಿಬಾತ್, ನಿಪ್ಪಿಟ್ಟು, ಕೊಡುಬಳೆ, ಚಕ್ಕುಲಿ, ಗೋಬಿಮಂಚೂರಿ, ಚುರುಮುರಿ, ಪಿಶ್ ಕಬಾಬ್, ಚಿಕನ್ ಕಬಾಬ್, ಮಟನ್ ಕಬಾಬ್, ಜಾಮೂನು ಸೇರಿದಂತೆ ವಿವಿಧ ರೀತಿಯ ಪೌಷ್ಟಿಕ ಆಹಾರಗಳನ್ನು ಸ್ವಂತ ತಾವೇ ತಯಾರು ಮಾಡಿಕೊಂಡು ಬಂದು ವಿದ್ಯಾರ್ಥಿಗಳಿಗೆ ನೀಡಿದ್ದಾರೆ ಎಂದರು.

ವಿದ್ಯಾರ್ಥಿಗಳು ತುಂಬ ಆಸಕ್ತಿಯಿಂದ ಆಹಾರದ ಮೇಳದಲ್ಲಿ ಭಾಗವಹಿಸಿ ವಿವಿಧ ತಿನಿಸುಗಳು ಸವಿದು ಹೊಸ ವರ್ಷವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿರುವುದು ಸಂತೋಷ ತಂದಿದೆ ಎಂದರು.

ಪ್ರತಿ ಶಾಲೆಗೆ ಆಗಮಿಸಿದ ಗಣ್ಯರನ್ನು ವಿದ್ಯಾರ್ಥಿಗಳು ಸಡಗರ ಸಂಭ್ರಮದಿಂದ ಸ್ವಾಗತಿಸಿದರು. ಗಣ್ಯರು ಕೂಡ ಆಹಾರ ಮೇಳದಲ್ಲಿ ಬಗೆ ಬಗೆಯ ತಿನಿಸುಗಳನ್ನು ಸವಿದು ಹರ್ಷ ವ್ಯಕ್ತಪಡಿಸಿದರು. ಶಾಲೆಯಲ್ಲಿ ಪ್ರತಿ ವರ್ಷ ಆಹಾರ ಮೇಳವನ್ನು ನಡೆಸುವ ಮೂಲಕ ಆಹಾರದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿರುವುದು ವಿಶೇಷವಾಗಿದೆ.

ಶಾಲೆಯ ಅಧ್ಯಕ್ಷೆ ಪಿ.ಕಸ್ತೂರಿ, ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ, ಪುರಸಭಾ ಮಾಜಿ ಅಧ್ಯಕ್ಷೆ ಸೌಭಾಗ್ಯಮ್ಮ ಮಹಾದೇವು, ನಿವೃತ್ತ ಬಿಇಒ ಮರೀಗೌಡ, ನಿವೃತ್ತ ಮುಖ್ಯಶಿಕ್ಷಕರಾದ ಗುರುಲಿಂಗಯ್ಯ, ರಮೇಶ್, ನಾರಾಯಣಸ್ವಾಮಿ, ನಿವೃತ್ತ ಅಧಿಕಾರಿ ಸೀನಯ್ಯ, ಶಾಲೆಯ ಶಿಕ್ಷಕ ವರ್ಗದವರು ಭಾಗವಹಿಸಿದ್ದರು.