ಜಿಲ್ಲೆ

ಓದುವ ಅಭ್ಯಾಸ ರೂಢಿಸಿಕೊಳ್ಳಿ

ರೇಷ್ಮೆ ನಗರ ಡೆಸ್ಕ್

ಬನ್ನಿಕುಪ್ಪೆ (ಬಿ) ಕ್ಲಷ್ಟರ್‌ನ ಸಂಪನ್ಮೂಲ ವ್ಯಕ್ತಿ ಚಿಕ್ಕವೀರಯ್ಯ ಸಲಹೆ

 ಬಿಡದಿ : ಓದುವ ಅಭ್ಯಾಸವನ್ನು ಉತ್ತೇಜಿಸಲು ರಾಷ್ಟ್ರೀಯ ಓದುವ ದಿನವನ್ನು ಜೂ.19ರಂದು ಆಚರಿಸಲಾಗುತ್ತದೆ ಎಂದು ಬನ್ನಿಕುಪ್ಪೆ (ಬಿ) ಕ್ಲಷ್ಟರ್‌ನ ಸಂಪನ್ಮೂಲ ವ್ಯಕ್ತಿ ಚಿಕ್ಕವೀರಯ್ಯ ತಿಳಿಸಿದರು.

ಬನ್ನಿಕುಪ್ಪೆ ಬಿ ಕ್ಲಸ್ಟರ್‌ನ ಕೇತಿಗಾನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಓದುವ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಮೊಬೈಲ್ ಹೈಟೆಕ್ ಗೀಳು ಎಲ್ಲ ವಯೋಮಾನದವರನ್ನೂ ಮಾಯಾವಿಯಂತೆ ಸೆಳೆದಿದ್ದು, ಪುಸ್ತಕಗಳ ಹಾಳೆಗಳನ್ನು ಮುಟ್ಟಿ ಓದುವ ಪರಿಪಾಠ ಕಡಿಮೆಯಾಗುತ್ತಿದೆ. ಓದುವುದೆಂದರೆ ಅರಿವನ್ನು ವಿಸ್ತರಿಸುವುದು ಎಂದರ್ಥ. ಓದುತ್ತಾ ಕುಳಿತರೆ ಕಲ್ಪನಾ ಶಕ್ತಿ ಹೆಚ್ಚುತ್ತದೆ, ಏಕಾಗ್ರತೆ ಹೆಚ್ಚುತ್ತದೆ, ವಿದ್ಯಾರ್ಥಿಗಳಲ್ಲಿ ಇತರೆ ವಿಚಾರಗಳಿಗೆ ಬೆಸುಗೆಯಾಗಲು ಓದು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ, ಯುವಜನತೆಯ ಅಲ್ಲದೆ ಎಲ್ಲಾ ವಯೋಮಾನದ ಜನತೆಯ ಓದುವ ಸಂಸ್ಕೃತಿ ಕಡಿಮೆಯಾಗುತ್ತಾ ಬರುತ್ತಿದೆ. ಯಾವ ಮನೆಯಲ್ಲಿ ಗ್ರಂಥಾಲಯ ಇರುತ್ತದೋ ಆ ಮನೆ ಸಹಜವಾಗಿ ಶಾಂತಿ, ಸಹನೆ, ಪರಸ್ಪರ ಹೊಂದಾಣಿಕೆಯಿಂದ ಇರುತ್ತದೆ. ಯಾವ ಕುಟುಂಬಗಳಲ್ಲಿ ಅತಿಯಾದ ಮೊಬೈಲ್ ಬಳಸುತ್ತಾ, ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಕಾಲ ಕಳೆಯುತ್ತಾರೋ ಆ ಮನೆಯಲ್ಲಿ ಸಾಮರಸ್ಯವೆ ಇಲ್ಲದಂತಾಗುತ್ತದೆ ಎಂದು ತಿಳಿಸಿದರು.