ಜಿಲ್ಲೆ

ಪವಿತ್ರ ತೀರ್ಥೋಧ್ಬವಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ; ಭಂವರ್ ಸಿಂಗ್ ಮೀನಾ

ಮಡಿಕೇರಿ: ಪವಿತ್ರ ತೀರ್ಥೋಧ್ಬವವು ರಾತ್ರಿ ಸಂಭವಿಸುವುದರಿಂದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪ್ರಭಾರ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಸೂಚಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅ೧೭ ರಂದು ರಾತ್ರಿ ೭.೨೧ ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ನಡೆಯಲಿರುವ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ಅಗತ್ಯ ಸಿದ್ಧತೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.


ತೀರ್ಥೋದ್ಭವ ರಾತ್ರಿ ಸಂಭವಿಸುವುದರಿಂದ ಅಗತ್ಯ ಬೆಳಕು ವ್ಯವಸ್ಥೆ ಮಾಡಿಕೊಳ್ಳಬೇಕು. ತಲಕಾವೇರಿಯಲ್ಲಿ ಗಣ್ಯರು ಹಾಗೂ ಮಾಧ್ಯಮವರಿಗೆ ಹಿಂದಿನ ವರ್ಷದಂತೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡುವುದು, ಗಣ್ಯ ವ್ಯಕ್ತಿಗಳ ವಾಹನ ನಿಲುಗಡೆ, ವಿದ್ಯುನ್ಮಾನ ಮಾಧ್ಯಮಗಳ ’ಒಬಿ’ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.


ಸುಗಮ ಸಾರಿಗೆ ಸಂಪರ್ಕ ಸಂಬಂಧ ಅಗತ್ಯ ಬಸ್ ಸೌಲಭ್ಯ ಕಲ್ಪಿಸುವುದು. ಸೆಸ್ಕ್ ವತಿಯಿಂದ ವಿದ್ಯುತ್ ಸಂಪರ್ಕ ಒದಗಿಸುವುದು. ಶುಚಿತ್ವಕ್ಕೆ ಒತ್ತು ನೀಡುವುದು. ಅಲ್ಲಲ್ಲಿ ಡಸ್ಟ್‌ಬಿನ್, ಕುಡಿಯುವ ನೀರು ವ್ಯವಸ್ಥೆ ಮಾಡುವುದು ಮತ್ತಿತರ ಕಾರ್ಯಗಳನ್ನು ಗ್ರಾ.ಪಂ. ಅಧಿಕಾರಿಗಳು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹೇಳಿದರು.


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾತ್ಕಾಲಿಕ ಕ್ಲಿನಿಕ್ ತೆರೆಯುವುದು. ಧಾರ್ಮಿಕ ಗೀತಗಾಯನ ಕಾರ್ಯಕ್ರಮ ಏರ್ಪಡಿಸುವುದು. ಹೀಗೆ ಹಲವು ಕಾರ್ಯಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.


ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ತಲಕಾವೇರಿ ಮತ್ತು ಭಾಗಮಂಡಲ ಭಗಂಡೇಶ್ವರ ದೇವಾಲಯಗಳ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪರವರು ತಲಕಾವೇರಿ ಪವಿತ್ರ ತೀರ್ಥೋಧ್ಬವ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.


ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ಮಾತನಾಡಿ, ತಲಕಾವೇರಿ ಪವಿತ್ರ ತೀರ್ಥೋಧ್ಬವ ಸಂಬಂಧ ಪೊಲೀಸ್ ಇಲಾಖೆಯಿಂದ ಮೂವರು ಡಿವೈಎಸ್‌ಪಿ, ೭ ಇನ್ಸ್‌ಪೆಕ್ಟರ್, ೧೭ ಸಬ್ ಇನ್ಸ್‌ಪೆಕ್ಟರ್, ೩೦೦ ಪೊಲೀಸರು, ೧೦೦ ಮೀಸಲು ಪೊಲೀಸ್ ಸಶಸ್ತ್ರ ಪಡೆಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.


ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಇಇ ನಾಗರಾಜು, ಅಬಕಾರಿ ಉಪ ಆಯುಕ್ತ ಜಗದೀಶ, ತಹಶೀಲ್ದಾರ್ ಪಿ.ಎಸ್.ಮಹೇಶ್, ತಾ.ಪಂ.ಇಒ ಶೇಖರ್, ತಾಲೂಕು ವೈದ್ಯಾಧಿಕಾರಿ ಡಾ.ಚೇತನ್, ಸೆಸ್ಕ್ ಎಇಇ ವಿನಯ ಕುಮಾರ್, ನಗರಸಭೆ ಪೌರಾಯುಕ್ತ ವಿಜಯ, ಪೊಲೀಸ್ ಇನ್ಸ್‌ಪೆಕ್ಟರ್ ಮೇದಪ್ಪ ಇತರರು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಇದುವರೆಗೆ ಕೈಗೊಳ್ಳಲಾಗಿರುವ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.