ಕಳಸವನ್ನು ಮೂಡಿಗೆರೆ ಮಂಡಲದಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಬಿಜೆಪಿ ಮಂಡಲವನ್ನಾಗಿ ಮಾಡಬೇಕು ಎಂದು ಕಳಸದ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. 
ಜಿಲ್ಲೆ

ಕಳಸ ಬಿಜೆಪಿ ಪ್ರತ್ಯೇಕ ಮಂಡಲವಾಗಿಸಿ

ಎಸ್.ಎನ್.ರವೀಂದ್ರ

ಕಳಸ: ಕಳಸ ಆಡಳಿತಾತ್ಮಕವಾಗಿ ತಾಲೂಕು ಕೇಂದ್ರವಾಗಿದ್ದು, ಕಳಸವನ್ನು ಮೂಡಿಗೆರೆ ಮಂಡಲದಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಬಿಜೆಪಿ ಮಂಡಲವನ್ನಾಗಿ ಮಾಡಬೇಕು ಎಂದು ಕಳಸದ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಕಳಸ ಮಹಿಳಾ ಮಂಡಳಿಯಲ್ಲಿ ಸೋಮವಾರ ಬಿಜೆಪಿ 150ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿ ಸಭೆ ನಡೆಸಿ ಒತ್ತಾಯ ಮಾಡಿದ್ದಾರೆ. ಈ ಕುರಿತು ಬಿಜೆಪಿ ಮುಖಂಡ ರಂಗನಾಥ್ ಮಾತನಾಡಿ, ಈ ಹಿಂದೆ ಕಳಸ ಹೋಬಳಿಯಾಗಿತ್ತು. ಆದ್ದರಿಂದ ಕಳಸ ಮೂಡಿಗೆರೆ ಮಂಡಲದಲ್ಲಿತ್ತು. ಈಗ ತಾಲೂಕು ಕೇಂದ್ರವಾಗಿದೆ. ನಾವು ಪ್ರತ್ಯೇಕವಾಗಿ ಕಳಸ ಮಂಡಲ ಮಾಡಬೇಕು ಎಂದು ಒತ್ತಾಯಿಸುತ್ತಿದ್ದೇವೆ. ನಾವೆಲ್ಲ ಆಡಳಿತ ಜಿಲ್ಲೆಯ ಕೈಕೆಳಗೆ ಇರಬೇಕೆ ಹೊರತು ಮೂಡಿಗೆರೆ ಮಂಡಲದಲ್ಲಿರಲು ಒಪ್ಪುವುದಿಲ್ಲ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಿಗೂ ಒತ್ತಡ ಹೇರುತ್ತೇವೆ ಎಂದು ಹೇಳಿದರು.
ಮುಖಂಡ ಗಿರೀಶ್ ಹೆಮ್ಮಕ್ಕಿ ಮಾತನಾಡಿ, ಕಳಸದಲ್ಲಿ ಬಿಜೆಪಿಯನ್ನು ಗಟ್ಟಿ ಮಾಡಲು ಮಂಡಲದ ಅವಶ್ಯಕತೆ ಇದೆ. ಇದಕ್ಕಾಗಿ ನಾವು ಹೋರಾಟ ಮಾಡುತ್ತೇವೆ. ಕಳಸವನ್ನು ಮಂಡಲ ಮಾಡುವವರೆಗೆ ಪಕ್ಷದ ಯಾವುದೇ ಸಭೆಗೂ ಹಾಜರಾಗುವುದಿಲ್ಲ. ರಾಜ್ಯಾಧ್ಯಕ್ಷರನ್ನು ಭೇಟಿಯಾಗುವುದಕ್ಕಿಂತ ಮುಂಚಿತವಾಗಿ ಹಿರಿಯ ನಾಯಕರು ಸೇರಿ ಕಳಸ ಮಂಡಲ ಮಾಡಿದರೆ ಉತ್ತಮ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಜಯ ಸದಾನಂದ ಮಾತನಾಡಿ, ಕಳಸವನ್ನು ಮಂಡಲ ಮಾಡಬೇಕು ಎನ್ನುವ ಒತ್ತಡ ಕಳಸ ಬಿಜೆಪಿ ಕಾರ್ಯಕರ್ತರದ್ದು. ಇದನ್ನು ನಾನು ಜಿಲ್ಲಾಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಮುಖಂಡರಾದ ಕಾರ್ತಿಕ್ ಶಾಸೀ, ಬಿ.ಕೆ.ಮಹೇಶ್, ಪ್ರದೀಪ್ ಸಂಸೆ, ಜಗದೀಶ್ ನೆಲ್ಲಿಬೀಡು, ಸತೀಶ್ ಎಸ್.ಕೆ.ಮೇಗಲ್, ಸುರೇಶ್ ನೂಜಿ, ಗೋಪಾಲ ಗೌಡ ಹೆಮ್ಮಕ್ಕಿ, ರಾಜೇಶ್ ಮರಸಣಿಗೆ, ರಮೇಶ್ ಮರಸಣಿಗೆ, ಮಹೇಶ್ ಹಳುವಳ್ಳಿ, ಮಹೇಶ್ ಹೆರಟೆ ಇತರರಿದ್ದರು.