ಜಿಲ್ಲೆ

ದಿನಕ್ಕೆ 10 ಪುಟ ಪಠ್ಯೇತರ ಕನ್ನಡ ಓದು ರೂಢಿಸಿಕೊಳ್ಳಲಿ

ಕುಮಟಾ: ವಿದ್ಯಾರ್ಥಿಗಳು ಪ್ರತಿನಿತ್ಯ ಕನಿಷ್ಠ ಹತ್ತು ಪುಟಗಳನ್ನಾದರೂ ಪಠ್ಯೇತರ ಕನ್ನಡ ಓದುವುದನ್ನು ರೂಢಿಸಿಕೊಂಡಾಗ ಮಾತ್ರ ಮಾತೃಭಾಷೆ ಬೆಳೆಯಲು, ಸಾಹಿತ್ಯ ಕೃಷಿ ನಡೆಸಲು ಸಹಾಯಕವಾಗುತ್ತದೆ ಎಂದು ಹಿರಿಯ ಚಿಂತಕ ಪುಟ್ಟು ಕುಲಕರ್ಣಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂತೆಗುಳಿ ಕೆಪಿಎಸ್​ನಲ್ಲಿ ಕನ್ನಡ ಕಾರ್ತಿಕ 2024 ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ತಿಕ ನೃತ್ಯ, ಸಂಭ್ರಮ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಪರಿಷತ್​ನ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ ಮಾತನಾಡಿ, ಮಕ್ಕಳು ಹೆಚ್ಚೆಚ್ಚು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಕನ್ನಡದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಬೇಕು ಎಂದರು.

ಎಸ್​ಡಿಎಂಸಿ ಉಪಾಧ್ಯಕ್ಷ ಗಜಾನನ ದೇಶಭಂಡಾರಿ, ಮುಖ್ಯ ಶಿಕ್ಷಕಿ ವೀಣಾ ಭಟ್ಟ, ಸಾಹಿತ್ಯ ಪರಿಷತ್ತು ತಮ್ಮ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಸಂತಸ ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ತಾಲೂಕಾಧ್ಯಕ್ಷ ಎನ್.ಆರ್. ಗಜು ಮಾತನಾಡಿ, ಶಾಲೆಗಳಲ್ಲಿ ಸಾಹಿತ್ಯಾಭಿರುಚಿ ಮತ್ತು ಸಾಂಸ್ಕೃತಿಕ ವಾತಾವರಣ ಹೆಚ್ಚಿಸಲು ಕನ್ನಡ ಕಾರ್ತಿಕದಂತಹ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿವೆ ಎಂದರು.

ಸಂತೇಗುಳಿ ಪಂಚಾಯಿತಿ ಸದಸ್ಯ ಜಮಾಲ ಸಾಬ್, ನಿವೃತ್ತಿ ಶಿಕ್ಷಕ ಗಣಪತಿ ನಾಯ್ಕ, ಕಾರ್ಯದರ್ಶಿ ಪ್ರದೀಪ ನಾಯಕ, ಇತರರಿದ್ದರು.

ಅಂಕಿತಾ ಸಂಗಡಿಗರು ಪ್ರಾರ್ಥಿಸಿದರು. ಕಸಾಪ ತಾಲೂಕಾಧ್ಯಕ್ಷ ಸುಬ್ಬಯ್ಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ನಾಯ್ಕ, ಸುಶೀಲಾ ಭಟ್ ಹಾಗೂ ಸಂಧ್ಯಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಗಾಯತ್ರಿ ಶಿರೋಡ್ಕರ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸೊಗಸಾಗಿ ಮೂಡಿಬಂತು. ಪ್ರದರ್ಶನಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.