ಜಿಲ್ಲೆ

ಹುಣಸೂರನ್ನು ಕೇಂದ್ರವನ್ನಾಗಿಸಿಕೊಂಡು ಪ್ರತ್ಯೇಕ ಜಿಲ್ಲೆ ಮಾಡಿ: ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಒತ್ತಾಯ

ಮೈಸೂರು: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಹೆಸರು ಅಮರವಾಗಿ ಉಳಿಸಲು ಹುಣಸೂರನ್ನು ಕೇಂದ್ರವನ್ನಾಗಿಸಿಕೊಂಡು ಪ್ರತ್ಯೇಕ ಜಿಲ್ಲೆಯಾಗಿಸಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಈಗ ಮೈಸೂರು ಜಿಲ್ಲಾಧಿಕಾರಿ ಮೇಲೆ ಸಾಕಷ್ಟು ಒತ್ತಡ ಇದ್ದು, ತಾಲೂಕು ಕೇಂದ್ರಗಳಿಗೆ ಹೋಗಲು ಕಷ್ಟವಾಗುತ್ತದೆ. ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹಾಗಾಗಿ ದೇವರಾಜ ಅರಸು ಹುಟ್ಟಿದ ತಾಲೂಕು ಪ್ರತ್ಯೇಕ ಜಿಲ್ಲೆಯಾದರೆ ಸಾಕಷ್ಟು ಅನುಕೂಲಗಳು ಆಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ ಕೋಟೆ ತಾಲೂಕು ರಾಜ್ಯದಲ್ಲೇ ಅರಣ್ಯ ಸಂಪತ್ತು ಇರುವ ತಾಲೂಕುಗಳು ಆಗಿದ್ದು, ತಂಬಾಕು ವಾಣಿಜ್ಯ ಬೆಳೆಯಿಂದ ನೂರಾರು ಕೋಟಿ ರೂ. ಆದಾಯ ಬರುತ್ತದೆ. ಜತೆಗೆ ಈ ಭಾಗದಲ್ಲಿ ಅತಿ ಹೆಚ್ಚು ಬುಡಕಟ್ಟು ಜನಾಂಗದವರು ಇದ್ದರೂ ಅವರ ಕಷ್ಟಗಳಿಗೆ ಸ್ಪಂದಿಸಲು ಈಗ ಜಿಲ್ಲಾಡಳಿತದಿಂದ ಸಾಧ್ಯವಾಗುತ್ತಿಲ್ಲ ಎಂದರು.
ನಮ್ಮ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ದೇವರಾಜ ಅರಸು ಅವರ ಹೆಸರು ಅಮರವಾಗಬೇಕು, ಕೆ.ಆರ್.ನಗರ, ಸಾಲಿಗ್ರಾಮ, ಎಚ್.ಡಿ.ಕೋಟೆ, ಸರಗೂರು, ಪಿರಿಯಾಪಟ್ಟಣ ಮತ್ತು ಹುಣಸೂರು ಸೇರಿ ಹುಣಸೂರು ಪ್ರತ್ಯೇಕ ಜಿಲ್ಲೆಯಾಗಬೇಕು. ಈ ಕುರಿತು ಒತ್ತಾಯಿಸಲು ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ. ಸಂಘರ್ಷಕ್ಕೆ ಎಡೆಯಾಗದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಲು ನಿರ್ಧರಿಸಲಾಗಿದೆ ಎಂದರು.
ಸಮಸ್ಯೆ ಬಗೆಹರಿಸಿದ ಮೋದಿ
ದೇಶದಲ್ಲಿ ಇದ್ದ ಸುಮಾರು 500 ವರ್ಷಗಳ ಸಮಸ್ಯೆಯನ್ನು ಪ್ರಧಾನಿ ನರೇಂದ್ರಮೋದಿ ಅವರು ಬಗೆಹರಿಸಿದ್ದು, ಆಯೋಧ್ಯೆಯಲ್ಲಿ ಈಗ ಶ್ರೀರಾಮಮಂದಿರ ಉದ್ಘಾಟನೆಗೊಂಡಿದೆ. ಭಾರತೀಯರ ಆರಾಧ್ಯ ದೈವ, ಭಾರತೀಯ ಅಸ್ಮಿತೆಯಾಗಿರುವ ರಾಮನ ಮಂದಿರ ಉದ್ಘಾಟನೆಗೊಂಡಿರುವುದು ಸಂತೋಷದಾಯಕವಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರಮೋದಿ ಅವರನ್ನು ಅಭಿನಂದಿಸುವುದಾಗಿ ವಿಶ್ವನಾಥ್ ಹೇಳಿದರು.
ದೇಶದಲ್ಲಿ ಅತಿ ಹೆಚ್ಚು ಜಿಎಸ್‌ಟಿ ಕಟ್ಟುತ್ತಿರುವ ರಾಜ್ಯ ಕರ್ನಾಟಕವಾಗಿದೆ. ಆದರೂ ನಿರೀಕ್ಷಿತ ಅನುದಾನ ನೀಡುತ್ತಿಲ್ಲ. ಹಿಂದೆ ಚುನಾವಣೆ ಸಮಯದಲ್ಲಿ 15 ಲಕ್ಷ ರೂ. ಅನ್ನು ಖಾತೆಗೆ ಹಾಕುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರಮೋದಿ ಅವರು, ಈಗಲಾದರೂ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಸಂಸತ್ ಭವನದಲ್ಲಿ ಕಲಾಪ ನಡೆಯುತ್ತಿರುವಾಗಲೇ ನುಗ್ಗಿ ದಾಂಧಲೆ ಎಬ್ಬಿಸಿದ್ದ ಮೂವರಿಗೆ ಸಂಸದ ಪ್ರತಾಪ್‌ಸಿಂಹ ಪಾಸ್ ನೀಡಿದ್ದಾರೆ. ಆದರೆ, ಈಗ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ. ಆ ಯುವಕರು ಬಡತನ, ನಿರುದ್ಯೋಗದ ವಿರುದ್ಧ ಧ್ವನಿ ಎತ್ತಿದ್ದರು. ಹೀಗಾಗಿ ಅವರು ವಿಚಾರಣೆ ಸಮಯದಲ್ಲಿ ಏನೇನು ಹೇಳಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ಹುಣಸೂರಿನ ವಕೀಲ ಶಿವಕುಮಾರ್, ವಿನೋದ್‌ರಾಜ್ ಇದ್ದರು.