ಬೆಟ್ಟದಪುರ: ಗ್ರಾಮದ ಅಭಿವೃದ್ಧಿಗೆ ಮಂಜೂರಾಗಿರುವ ಅನುದಾನವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಪಶು ಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪರದಹಳ್ಳಿ ಗ್ರಾಮದಲ್ಲಿ ಬುಧವಾರ ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಕಲ್ಪಿಸಲಾಗುವುದು. ಈಗಾಗಲೇ ಗ್ರಾಮದ ಕೆಲವು ಕೆರೆ, ಸಮುದಾಯ ಭವನದ ಅಭಿವೃದ್ಧಿಗೆ ಅನುದಾನ ಕಲ್ಪಿಸಲಾಗಿದೆ ಎಂದರು.
ಚಪ್ಪರದಹಳ್ಳಿ ಗ್ರಾಮದ ಶ್ರೀ ಕೊಳ್ಳಿ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನ ಶಿಥಿಲಗೊಂಡಿದ್ದು, ಚುನಾವಣಾ ಪೂರ್ವ ಭರವಸೆಯಂತೆ ದೇವಾಲಯ ಅಭಿವೃದ್ಧಿಗೆ ಅನುದಾನ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಸಚಿವ ಕೆ. ವೆಂಕಟೇಶ್ ಪ್ರತಿಕ್ರಿಯಿಸಿ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಅನುದಾನ ಇಲ್ಲ. ಗ್ರಾಮಸ್ಥರು ಒಟ್ಟು ಸೇರಿ ದೇವಾಲಯ ಕಾಮಗಾರಿ ಪ್ರಾರಂಭಿಸಿದಲ್ಲಿ ವೈಯಕ್ತಿಯ ದೇಣಿಗೆ ನೀಡುವ ಮೂಲಕ ಸಹಕಾರ ನೀಡುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಸಚಿವರು ಉದ್ಘಾಟನೆ ಮಾಡಿದರು.
ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಆಶ್ರಯ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ರಹಮತ್ ಜಾನ್ ಬಾಬು, ವಕೀಲ ಸುಂದ್ರೇಶ್, ಮುಖಂಡ ಸಿ.ಕೆ. ಪ್ರಕಾಶ್, ಸಿ.ಎನ್.ಬಸವರಾಜು, ಸಿ.ಆರ್.ಅಂಜನಿಗೌಡ, ರಾಮೇಗೌಡ, ಈ ರಾಜು, ರಾಮಕೃಷ್ಣೇಗೌಡ, ಪುಟ್ಟಸ್ವಾಮಿಗೌಡ, ಹಳಿಯೂರು ಶೇಖರ್, ಶಾಮಿಯಾನ ರವಿ, ಶಾಮಿಯಾನ ದೇವರಾಜ್, ಕೀರ್ತಿ, ಸಿ.ಎನ್ ರಾಜೇಶ್, ಶಿವು, ನಂಜುಂಡಾಚಾರಿ, ರಾಜಭೋವಿ, ಚೇತನ್, ಜಿ.ಪಂ ಎಇಇ ಮಲ್ಲಿಕಾರ್ಜುನ, ಇಂಜಿನಿಯರ್ ಮೇಘನಾ, ಬಿಇಒ ಬಸವರಾಜು ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.