ಮದ್ದೂರು: ಅಂಗವಿಕಲರು ಸರ್ಕಾರ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಶಾಸಕ ಕೆ.ಎಂ.ಉದಯ್ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 18 ಅಂಗವಿಕಲರಿಗೆ ಉಚಿತವಾಗಿ ನೀಡಲಾದ ಬೈಕ್‌ಗಳನ್ನು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಅವರಣದಲ್ಲಿ ಸೋಮವಾರ ವಿತರಣೆ ಮಾಡಿ ಮಾತನಾಡಿದರು. ಸರ್ಕಾರ ಅಂಗವಿಕಲರ ಶ್ರೇಯೋಬಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸವಲತ್ತುಗಳನ್ನು ಉಪಯೋಗಿಸಿಕೊಂಡು ಉತ್ತಮ ರೀತಿಯ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕಿನಲ್ಲಿ ಇನ್ನೂ ಹಲವಾರು ಅಂಗವಿಕಲರಿಗೆ ಬೈಕ್ ಅವಶ್ಯಕತೆ ಇದ್ದು, ಎಲ್ಲರಿಗೂ ಸರ್ಕಾರದಿಂದ ಒಟ್ಟಿಗೆ ಕೊಡಲು ಸಾಧ್ಯವಿಲ್ಲ. ಹಾಗಾಗಿ ಹಂತ ಹಂತವಾಗಿ ಬೈಕ್ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ವ್ಯಕ್ತಡಿಸಿದರು.
ತಾಪ ಇಒ ರಾಮಲಿಂಗಯ್ಯ, ಗ್ರಾಪಂ ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ್, ಸರ್ವೋದಯ ವಿಕಲ ಚೇತನರ ಸಂಘದ ಅಧ್ಯಕ್ಷ ಎಸ್.ಸಿ.ರಮೇಶ್, ಎಂ.ಆರ್.ಡಬ್ಲ್ಯೂ ತಾಲೂಕು ಸಂಯೋಜಕ ಪುಟ್ಟಸ್ವಾಮಿ, ಗ್ರಾಮೀಣಾ ಪುನರ್ವಸತಿ ಕಾರ್ಯಕರ್ತರಾದ ಸಿ.ಕೆ.ಕೃಷ್ಣ, ಬೋರೇಗೌಡ, ರಾಜಣ್ಣ ಇತರರು ಇದ್ದರು.