ಬೆಂಗಳೂರು: ಭಾರತ ಸಂವಿಧಾನದ ಆಶಯ, ಮೌಲ್ಯಗಳ ಕುರಿತು ಜನಸಾಮಾನ್ಯರಿಗೆ ತಿಳಿಸುವ ಆಶಯದಿಂದ ‘ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ’ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಎಲ್ಲ ನಾಗರಿಕ ಸಂಘಟನೆಗಳು ಸಹಕರಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಒ) ಕಾಂತರಾಜು ಪಿ.ಎಸ್ ಮನವಿ ಮಾಡಿದರು.
ಬನಶಂಕರಿಯಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಪೂರ್ವ ಸಿದ್ದತೆ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ 31 ಜಿಲ್ಲೆಗಳಲ್ಲಿ ಜ.26ರಿಂದ ಫೆ.23ರವರೆಗೆ ಏಕಕಾಲದಲ್ಲಿ ರಾಜ್ಯ ಮಟ್ಟದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ (ಜ.26) ಜಿಲ್ಲಾ ಉಸ್ತುವಾರಿ ಸಚಿವರು ಜಾಥಾಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಆನೇಕಲ್ ತಾಲೂಕಿನ 28 ಗ್ರಾಪಂಗಳಲ್ಲಿ ಹತ್ತು ದಿನ, ಬೆಂಗಳೂರು ಉತ್ತರದ 11 ಗ್ರಾಪಂ, ಯಲಹಂಕದ 18 ಗ್ರಾಪಂ, ಬೆಂಗಳೂರು ಪೂರ್ವದಲ್ಲಿ 11 ಗ್ರಾಪಂಗಳಲ್ಲಿ ತಲಾ 6 ದಿನಗಳ ವಾಹನ ಸಂಚರಿಸಲಿದ್ದು, ಕ್ರೀಡಾಪಟುಗಳನ್ನು ಪ್ರತಿನಿಧಿಯಾಗಿ ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ರೆಡ್ಡಿ, ಜಿಪಂ ಮುಖ್ಯ ಯೋಜನಾಧಿಕಾರಿ ವಿನೂತ ರಾಣಿ ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.