ಕಾನಹೊಸಹಳ್ಳಿ: ಮಗುವಿಗೆ ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆಯಾಗಿದೆ ಎಂದು ಕೂಡ್ಲಿಗಿ ಹಿರೇಮಠದ ಶ್ರೀಪ್ರಶಾಂತಸಾಗರ ಸ್ವಾಮೀಜಿ ತಿಳಿಸಿದರು.
ಕಾನಹೊಸಹಳ್ಳಿ ಶರಣೇಶ್ವರ ವಿದ್ಯಾಸಂಸ್ಥೆಯ ವಿದ್ಯಾನಿಕೇತನ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹುಟ್ಟಿದ ಯಾವ ಮಗುವೂ ದಡ್ಡರಲ್ಲ. ಪ್ರತಿಯೊಂದು ಮಗುವೂ ಬುದ್ಧಿವಂತ ಮಗುವೇ ಆಗಿರುತ್ತದೆ. ನಾವು ಯಾವ ರೀತಿ ಬೆಳೆಸುತ್ತೇವೊ ಆ ರೀತಿ ಬೆಳೆಯುತ್ತದೆ. ತಾಯಿ ತನ್ನ ಮಗುವನ್ನು ಮಡಿಲಲ್ಲಿ ಇಟ್ಟುಕೊಂಡು ವಿದ್ಯೆ ಬುದ್ಧಿ ಸಂಸ್ಕಾರ ಕೊಡುವುದು ತಾಯಿಯ ಕರ್ತವ್ಯ.
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದೇ ನೀವು ಕೊಡುವ ಬಹುದೊಡ್ಡ ಆಸ್ತಿಯಾಗಿದೆ ಎಂದರು.
ಶಿಕ್ಷಣಸಂಸ್ಥೆ ಕಾರ್ಯದರ್ಶಿ ಕೆ.ಎಂ.ಹಷರ್ವರ್ದನ್ ಮಾತನಾಡಿ, ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಸಂಸ್ಕಾರ ಕೊಟ್ಟರೆ ಅಂತಹ ಮಕ್ಕಳು ಭವಿಷ್ಯ ಉಜ್ವಲವಾಗುತ್ತದೆ. ಪೋಷಕರು ಪ್ರತಿದಿನ ಮಕ್ಕಳೊಂದಿಗೆ ಸಂವಹನ ಮಾಡಬೇಕು. ಬಾಲ್ಯದಲ್ಲಿ ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುತ್ತವೆ ಎಂದರು.
ಪಂಡಿತ ವಿಜಯಾನಂದ ಶಾಸೀ, ನಿರ್ಮಲ ಶಶಿಧರ್, ಶಿಕ್ಷಕಿ ಸಾಜಿದ್, ಚನ್ನವೀರಸ್ವಾಮಿ, ನಂದಿನಿ, ಆಶಾ, ಅಶ್ವಿನಿ, ಅಫ್ರೀದ್ ಇತರರಿದ್ದರು.