ನಾಲತವಾಡ: ಪಾಲಕರು ತಮ್ಮ ಮಕ್ಕಳಿಗೆ ಕಾನೂನಿನ ಅರಿವು ನೀಡಿದರೆ ಮಾತ್ರ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಬಹುದು ಎಂದು ಮುದ್ದೇಬಿಹಾಳ ಸಿಪಿಐ ಮಹ್ಮದ್ ಫಸಿವುದ್ದೀನ್ ಹೇಳಿದರು.
ಪಟ್ಟಣದ ರತ್ನಸಂಗಮ ಕಲ್ಯಾಣಮಂಟಪದಲ್ಲಿ ಸೋಮವಾರ ಸಂಜೆ ಮುದ್ದೇಬಿಹಾಳ ಪೊಲೀಸ್ ಠಾಣೆ ಹಾಗೂ ನಾಲತವಾಡ ಹೊರ ಪೊಲೀಸ್ ಠಾಣೆ ವತಿಯಿಂದ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಗಾಂಜಾ, ಜೂಜಾಟ, ಮಟ್ಖಾ ದಂಧೆ, ಸಾರಾಯಿ ಮಾರಾಟಗಾರರ ಮಾಹಿತಿಯನ್ನು ಹೊರ ಪೊಲೀಸ್ ಠಾಣೆಗೆ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಟ್ರಾಫಿಕ್ ಜಾಮ್ ತಡೆಗೆ ಪೊಲೀಸರನ್ನು ನೇಮಿಸಲಾಗುವುದು, ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಮಾಹಿತಿ ಹಂಚಿಕೊಳ್ಳಬೇಡಿ, ಮುಂಬರುವ ಜನಸಂಪರ್ಕ ಸಭೆಯಲ್ಲಿ ನಾವು ಕೈಗೊಂಡ ಕ್ರಮಗಳ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.
ಪತ್ರಕರ್ತ ಯೂನೂಸ್ ಮೂಲಿಮನಿ, ಭೀಮಣ್ಣ ಗುರಿಕಾರ ಹಾಗೂ ಗುಂಡಪ್ಪ ಚಲವಾದಿ ಮಾತನಾಡಿ, ಪಟ್ಟಣ ವ್ಯಾಪ್ತಿ ದೊಡ್ಡದಾಗಿದ್ದು, ಇಲ್ಲಿ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕಲ್ಲದೆ, ಓರ್ವ ಪಿಎಸ್‌ಐ ನೇಮಕಾತಿ ಮಾಡಿಕೊಳ್ಳಬೇಕೆಂದು ತಿಳಿಸಿದರು.
ವೈನ್‌ಶಾಪ್ ಹೊರತುಪಡಿಸಿ ವಿವಿಧ ವಾರ್ಡ್‌ಗಳ ಪಾನ್‌ಶಾಪ್‌ಗಳಲ್ಲಿ ಎಗ್ಗಿಲ್ಲದೆ ಅಕ್ರಮವಾಗಿ ಸಾರಾಯಿ ಮಾರಾಟ ನಡೆಯುತ್ತಿದೆ. ಪೊಲೀಸ್ ಸಿಬ್ಬಂದಿ ಗಮನಹರಿಸಿ ತಡೆಗಟ್ಟಬೇಕು. ವಿವಿಧೆಡೆ ಸಮರ್ಪಕ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಶರಣು ಭೋವಿ, ಮುರುಗೇಶ ಮಸ್ಕಿ, ಮಹಾಂತೇಶ ಗಂಗನಗೌಡ್ರ, ಚಂದ್ರಶೇಖರ ಭಿಕ್ಷಾವತಿಮಠ, ನಾಗಬೇನಾಳದ ಮೌನೇಶ ಮಾದರ ಆಗ್ರಹಿಸಿದರು.
ಮೈಬೂಬ ಹಳ್ಳೂರ, ಪಪಂ ಸದಸ್ಯ ಡಾ. ಶರಣಬಸು ಗಂಗನಗೌಡ್ರ, ಮಲ್ಲು ತಳವಾರ, ಪಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡ್ರ ಗಡ್ಡಿ, ಅಂಜುಮನ್ ಕಮಿಟಿ ಅಧ್ಯಕ್ಷ ಲಾಳೇಮಶಾಕ್ ಅವಟಿ ಇತರರಿದ್ದರು.