ಜಿಲ್ಲೆ

ಮಕ್ಕಳಿಗೆ ವಚನಗಳ ಸತ್ವದ ಅರಿವು ಮೂಡಿಸಲಿ

ಹಾನಗಲ್ಲ: ಅಂತಃಕರಣ ತುಂಬಿದ ನಡೆ ನುಡಿಯೊಂದಿಗೆ ಸಂಭ್ರಮದ ಮನಸಿನಿಂದ ನಮ್ಮ ಮನೆಗಳು ಮಹಾಮನೆಯಾದರೆ ಸುಖ ಸಮೃದ್ಧಿಯ ನೆಲೆಯಾಗಲು ಸಾಧ್ಯ ಎಂದು ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತಮಠದ ಶ್ರೀ ಶಿವಬಸವ ಸ್ವಾಮಿಗಳು ಹೇಳಿದರು.

ತಾಲೂಕಿನ ಅಕ್ಕಿಆಲೂರಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಅಕ್ಕನ ಬಳಗದ ಸಹಯೋಗದಲ್ಲಿ ಸಾವಿತ್ರಿ ನಾಗಪ್ಪ ಚೂರಿ ಅವರ ಮನೆಯಂಗಳದಲ್ಲಿ ಬುಧವಾರ ಆಯೋಜಿಸಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವಚನಗಳೆಂದರೆ ಬದುಕಿಗೆ ಜ್ಞಾನ ಪ್ರಸಾರದ ಚಿಂತನೆಗಳಾಗಿವೆ. ಶರಣರ ಬದುಕು-ಬರಹ ಒಂದೇ ಆಗಿತ್ತು. ಮನೆಗಳು ಸಾಮರಸ್ಯದ ಮೂಲಕ ಸಂತಸದಿಂದಿರಬೇಕಾಗಿದೆ. ಮಕ್ಕಳಿಗೆ ವಚನಗಳ ಸತ್ವದ ಅರಿವು ಮೂಡಿಸಲು ಎಲ್ಲರೂ ಮುಂದಾಗಬೇಕು. ಸುಸಂಸ್ಕೃತ ಜೀವನಕ್ಕೆ ಬೇಕಾಗುವ ಚಿಂತನೆಗಳನ್ನು ಕೈಗೊಳ್ಳುವಂತಾಗಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿರಾಡಂಬರದ ವೈಚಾರಿಕತೆ ಈಗ ಬೇಕಾಗಿದೆ. ಅದನ್ನು ಶರಣರು ವಚನ ಸಾಹಿತ್ಯದ ಮೂಲಕ ನೀಡಿದ್ದಾರೆ. ಪ್ರಗತಿಪರ ಚಿಂತನೆಗಳ ಮೂಲಕ ವಚನಗಳು ನಮ್ಮ ಮನೆ ಮನಸಿನ ಹಿತಕ್ಕೆ ತಕ್ಕುದಾಗಿವೆ. ಸಮಾನತೆ ಕಟ್ಟಿ ಕೊಟ್ಟ ಕಲ್ಯಾಣದ ಅಂದಿನ ನಡೆ ಎಲ್ಲ ಕಾಲಕ್ಕೂ ಸಲ್ಲುವ ಸಮಾನತೆಯ ಸ್ವೀಕಾರಾರ್ಹ ಸಂದೇಶಗಳಾಗಿವೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪೂರ ಮಾತನಾಡಿ, ಉತ್ತಮ ಸಂಸ್ಕಾರವೇ ನಮ್ಮ ಮನೆಗಳ ಬೆಳಕಾಗಿದೆ. ಶರಣರ ಚಿಂತನೆಗಳು ಆಡಂಬರವಿಲ್ಲದೆ ನಮ್ಮ ಮನಸನ್ನು ಅಂದಗೊಳಿಸುವ ಶಕ್ತಿ ಸಂದೇಶಗಳನ್ನು ಹೊಂದಿವೆ. ಮಕ್ಕಳಿಗೆ ಉತ್ತಮ ಜೀವನ ಅರಿಕೆ ಮಾಡಲು ಶರಣ ಸಂಗಮಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಇದನ್ನು ಅರಿತು ನಮ್ಮೆಲ್ಲ ಮನೆಗಳು ಮಹಾಮನೆಯಾಗಲು ಮುಂದಾಗೋಣ ಎಂದರು.

ಶ್ರೇಯಾ ಚೂರಿ, ನಾಗರಾಜ ಹಾವೇರಿ, ರಾಘವೇಂದ್ರ ಹಾವೇರಿ, ಅನ್ವಿತಾ ಕಾಂತರಾಜ, ಸ್ಪಂದನಾ ನಾಯಕ, ಸಹನಾ ಚಕ್ಕಿ, ನಯನಾ ಕುಂಚೂರ, ಪುನರ್ವಿ ಸಿಂಗಾಪೂರ, ಶ್ರಾವಣಿ ಕೊಟ್ರಣ್ಣನವರ, ಸಾತ್ವಿಕ ಬಳ್ಳಾರಿ, ಆರ್ಯನ್ ಬಳ್ಳಾರಿ ವಚನ ನೃತ್ಯ, ಭರತ ನಾಟ್ಯ, ವಚನ ಗಾಯನ, ವಚನ ರೂಪಕ ಪ್ರದರ್ಶಿಸಿದರು. ತಾಲೂಕು ಶಸಾಪ ಅಧ್ಯಕ್ಷ ಎಸ್.ಸಿ.ಕಲ್ಲನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಡಾ.ಅಕ್ಷತಾ ಮಲಗುಂದ ಆರೋಗ್ಯವಂತ ಮನೆ ಮನಸು ಕುರಿತು ಮಾತನಾಡಿದರು. ಶಿವಮ್ಮ ಚೂರಿ, ನಿರಂಜನ ಗುಡಿ, ಗೌರಮ್ಮ ಬೆಲ್ಲದ, ದೀಪಾ ವಿರುಪಣ್ಣನವರ ಅತಿಥಿಗಳಾಗಿದ್ದರು. ಭುವನೇಶ್ವರಿ ಪ್ರಾರ್ಥನೆ ಹಾಡಿದರು. ಸಾವಿತ್ರಿ ಚೂರಿ ಸ್ವಾಗತಿಸಿದರು. ಸಿಆರ್‌ಪಿ ನಾಗಪ್ಪ ಚೂರಿ ನಿರೂಪಿಸಿದರು. ಎಸ್.ಪಿ.ಚಿಲ್ಲೂರಮಠ ವಂದಿಸಿದರು.