ಇಳಕಲ್ಲ : ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಪಾದಯಾತ್ರೆ ಅ.15 ರಂದು ಬಳ್ಳಾರಿಗೆ ಆಗಮಿಸಲಿದ್ದು, ಮತ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ಜೋಡೋ ಪಾದಯಾತ್ರೆ ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ. ದೇಶದ ಜನರ ಮನಸ್ಸುಗಳನ್ನು ಬೆಸೆಯುವ ಬಾಂಧವ್ಯದ ಪಾದಯಾತ್ರೆಯಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ಹೊಸ ಚೈತನ್ಯವನ್ನು ರಾಹುಲ್ ಗಾಂಧಿ ತುಂಬಿದ್ದಾರೆ ಎಂದು ತಿಳಿಸಿದರು.
ಹುನಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡ್ಡಮನಿ, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ಸಾಕಾ, ಕಾರ್ಯದರ್ಶಿ ಅರುಣ ಬಿಜ್ಜಲ, ಶರಣಪ್ಪ ಆಮದಿಹಾಳ, ಶಾಂತಕುಮಾರ ಸುರಪುರ ಮಾತನಾಡಿ, ರಾಹುಲ್ ಗಾಂಧಿ ಕೈ ಬಲಪಡಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಳ್ಳಾರಿಗೆ ತೆರಳುವಂತೆ ಮನವಿ ಮಾಡಿದರು.
ರೆಹಮಾನ್‌ಸಾಬ ದೊಡ್ಡಮನಿ, ವಿಜಯಕುಮಾರ ಗದ್ದನಕೇರಿ, ಸಂಗಣ್ಣ ಓಲೇಕಾರ, ಜಾಕೀರ್‌ಹುಸೇನ್ ತಾಳಿಕೋಟಿ, ಮಹಮ್ಮದಸಾಬ್ ಭಾವಿಕಟ್ಟಿ, ಮಹಾಂತೇಶ ನರಗುಂದ, ಬಸವರಾಜ ಜಾಲಿಹಾಳ, ಅಬ್ಬು ಹಳ್ಳಿ, ಶಬ್ಬೀರ್ ಬಾಗವಾನ, ಸರಸ್ವತಿ ಈಟಿ, ಶ್ರೀನಿವಾಸ ಗುರಂ ಇತರರಿದ್ದರು.