ಶ್ರೀ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ, ಚುಂಚಶ್ರೀ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತರಾದ ಡಾ.ಕೆ.ಎಸ್.ರಾಜಣ್ಣ ಅವರನ್ನು ಸನ್ಮಾನಿಸಲಾಯಿತು. ದೇಶಹಳ್ಳಿಪಿ.ಶಿವಪ್ಪ, ಡಾ.ಬಿ.ಕೃಷ್ಣ, ಮಮತಾ ಶಂಕರೇಗೌಡ, ಶಂಕರಯ್ಯ, ವಿ.ಟಿ.ರವಿಕುಮಾರ್ ಇತರರಿದ್ದರು.  
ಜಿಲ್ಲೆ

ಕೆಂಪೇಗೌಡರ ಪುತ್ಥಳಿ ನಿರ್ಮಿಸಿ

ಲೋಕೇಶ್ ಮನು. ಡಿ

ಮದ್ದೂರು: ನಾಡಪ್ರಭು ಕೆಂಪೇಗೌಡ ಅವರ ಪುತ್ಥಳಿಯನ್ನು ಮದ್ದೂರು ಪಟ್ಟಣದ ಜನರು ಒಟ್ಟುಗೂಡಿ ನಿರ್ಮಿಸಿದರೆ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುತ್ತೇನೆ. ಇದಕ್ಕೆ ನಿಮ್ಮ ಸಹಕಾರ ಬೇಕು ಎಂದು ಪದ್ಮಶ್ರೀ ಪುರಸ್ಕೃತರಾದ ಡಾ.ಕೆ.ಎಸ್.ರಾಜಣ್ಣ ತಿಳಿಸಿದರು.


ಪಟ್ಟಣದ ಸಂಜಯ ಚಿತ್ರ ಮಂದಿರ ಸಮೀಪ ಶನಿವಾರ ಶ್ರೀ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಹಾಗೂ ಚುಂಚಶ್ರೀ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ 515ನೇ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೆಂಪೇಗೌಡರು ಅನನ್ಯ ಸಾಧನೆ ಮಾಡಿದ್ದಾರೆ. ಅವರು ನಿರಂತರ ಪರಿಶ್ರಮದಿಂದಾಗಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದೆ. ಕೋಟ್ಯಂತರ ಜನರು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಇಂತಹ ಮಹಾನ್ ಸಾಧಕನ ಪುತ್ಥಳಿಯನ್ನು ಎಲ್ಲರೂ ಸೇರಿ ನಿರ್ಮಾಣ ಮಾಡಿದರೆ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಉದ್ಘಾಟನಾ ಕಾರ್ಯಕ್ರಮಕ್ಕೆ ಕರೆಸುತ್ತೇನೆ ಎಂದರು.


ಕೆಂಪೇಗೌಡರು ಸಾಮಾನ್ಯ ಕುಟುಂಬದಿಂದ ಬಂದು ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಾವಿರಾರು ಕೆರೆಗಳನ್ನು ನಿರ್ಮಾಣ ಮಾಡಿದರು. ಎಲ್ಲ ಜಾತಿಯವರಿಗೂ ಅವರ ವೃತ್ತಿಗೆ ಅನುಕೂಲವಾಗುವಂತೆ ಹಲವಾರು ಪೇಟೆಗಳನ್ನು ನಿರ್ಮಾಣ ಮಾಡಿ ಜೀವನ ನಡೆಸಲು ಅನುಕೂಲ ಮಾಡಿಕೊಟ್ಟರು. ದೇವಾಲಯಗಳನ್ನು ನಿರ್ಮಾಣ ಮಾಡುವ ಜತೆಗೆ ಆಡಳಿತದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ವಿಶ್ವಕ್ಕೆ ಹೆಸರಾದವರು ಎಂದು ಹೇಳಿದರು.
ಕೇಂದ್ರ ಸರ್ಕಾರ ನನ್ನಂತ ಸಾಮಾನ್ಯ ವ್ಯಕ್ತಿಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಎಲ್ಲರಿಗೂ ಪ್ರಶಸ್ತಿ ನೀಡುವವರೆಗೂ ಪ್ರಧಾನಿ ಮೋದಿ ಅವರು ತಾಳ್ಮೆಯಿಂದ ಕುಳಿತು ಪ್ರಶಸ್ತಿ ಪಡೆದವರಿಗೆ ಅಭಿನಂದನೆ ಸಲ್ಲಿಸಿದ್ದು ಅವರ ವ್ಯಕ್ತಿತ್ವ ತೋರುತ್ತದೆ. ಇಂತಹ ವ್ಯಕ್ತಿಗಳು ಸಿಗುವುದು ತುಂಬಾ ವಿರಳ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ನನಗೆ ಹಲವು ರೀತಿಯಲ್ಲಿ ಅವಕಾಶ ನೀಡಿ ಸಹಕಾರ ನೀಡಿದ್ದಾರೆ ಎಂದು ನೆನೆದರು.

ನಾಡಪ್ರಭು ಕೆಂಪೇಗೌಡರ ಕುರಿತು ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ಕೃಷ್ಣೇಗೌಡ ಪ್ರಧಾನ ಭಾಷಣ ಮಾಡಿದರು. ಸಂಘದ ಅಧ್ಯಕ್ಷ ದೇಶಹಳ್ಳಿ ಪಿ.ಶಿವಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ರಾಘವೇಂದ್ರ, ನೆಲ್ಲಿಗೆರೆ ಬಾಲು, ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ, ವಳಗೆರೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಮಮತಾ ಶಂಕರೇಗೌಡ, ಶಂಕರಯ್ಯ, ಸುರೇಶ್, ವಿ.ಟಿ.ರವಿಕುಮಾರ್, ಜಿ.ಸಿ.ಮಹೇಶ್, ಚಂದ್ರಶೇಖರ್, ದೊರೆಸ್ವಾಮಿ ಇದ್ದರು.