ಬೆಂಗಳೂರು:ಪರಿಶಿಷ್ಟ ಜಾತಿ(ಎಸ್ಸಿ) ಹಾಗೂ ಪರಿಶಿಷ್ಟ ಪಂಗಡದ(ಎಸ್ಟಿ) ಕಲ್ಯಾಣ ಕಾರ್ಯಕ್ರಮಗಳಿಗೆ ನಿಗದಿಪಡಿಸಿರುವ ಅನುದಾನ ಬಳಸಿಕೊಂಡು ಕ್ರಿಯಾ ಯೋಜನೆ ರೂಪಿಸಬೇಕೆಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಅಧಿಕಾರಿಗಳಿಗೆ ಸೂಚಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಕಲ್ಯಾಣ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಕೊಳಗೇರಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಳಸಿಕೊಳ್ಳಬೇಕು. ವಿಳಂಬ ಮಾಡದೆ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕು.ನಿಗದಿಪಡಿಸಿದ ಅನುದಾನ ಇದಕ್ಕೆ ಬಳಸಿಕೊಳ್ಳಬೇಕು. ಬೇರೆ ಕಾರ್ಯಕ್ರಮಗಳಿಗೆ ವಿನಿಯೋಗಿಸಿಕೊಳ್ಳಬಾರದು ಎಂದರು.
ಪಾಲಿಕೆ ಎಲ್ಲ ವಲಯದ ಮುಖ್ಯ ಅಭಿಯಂತರರು, ಕೂಡಲೇ ಬೃಹತ್ ನೀರುಗಾಲುವೆ ವಿಭಾಗದ ಅಧಿಕಾರಿಗಳ ಜತೆ ಸಮನ್ವಯ ನಡೆಸಿ ಪ್ರಮುಖ ನೀರು ನಿಲ್ಲುವ ಸ್ಥಳಗಳನ್ನು ಪರಿಶೀಲಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ವಿಶೇಷ ಆಯುಕ್ತರಾದ ರೆಡ್ಡಿ ಶಂಕರ್‌ಬಾಬು, ಜಯರಾಮ ರಾಯಪುರ, ಡಾ. ತ್ರಿಲೋಕ್ ಚಂದ್ರ ಸೇರಿ ಮತ್ತಿತರರಿದ್ದರು.