ಜಿಲ್ಲೆ

ನಿವೇಶನ ಹಂಚಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಿ

ಎನ್.ವೆಂಕಟೇಶ್

ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಶಾಸಕ ಸುಬ್ಬಾರೆಡ್ಡಿ ಸೂಚನೆ ಗುಡಿಬಂಡೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ

ಗುಡಿಬಂಡೆ: ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ತುರ್ತಾಗಿ 750 ನಿವೇಶನ ನೀಡಲು ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ನಾಗಮಣಿ ಅವರಿಗೆ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಪಂ ವ್ಯಾಪ್ತಿಯ 8 ಗ್ರಾಪಂಗಳನ್ನು ಒಳಗೊಂಡಂತೆ ಅರ್ಹ ಫಲಾನುಭಗಳಿಗೆ ನಿವೇಶನ ವಿತರಿಸಲು ತುರ್ತಾಗಿ 750 ನಿವೇಶನಗಳನ್ನು ಸಿದ್ದಪಡಿಸಬೇಕೆಂದು ಸೂಚಿಸಿದರು.

ಇದಕ್ಕೆ ಉತ್ತರಿಸಿದ ಎಂ.ನಾಗಮಣಿ ತಾಲೂಕಿನ 8 ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನಗಳಿಗಾಗಿ 43 ಎಕರೆ ಜಮೀನು ಮೀಸಲಿಟ್ಟಿದ್ದು, 1636 ನಿವೇಶನಗಳನ್ನು ಸಿದ್ಧಪಡಿಸಲಾಗುವುದು, ಈಗಾಗಲೇ 384 ನಿವೇಶನಗಳು ವಿತರಣೆಗೆ ಸಿದ್ಧವಾಗಿದ್ದು, 750 ನಿವೇಶನಗಳನ್ನು ತ್ವರಿತಗತಿಯಲ್ಲಿ ಸಿದ್ಧಪಡಿಸಲಾಗುವುದೆಂದು ತಿಳಿಸಿದರು.

ನರೇಗಾ ಯೋಜನೆಯಡಿಲ್ಲಿ 4.94 ಕೋಟಿ ಬಳಕೆ ಮಾಡಬೇಕೆಂದು ತಿಳಿಸಿದ್ದು, ಈಗಾಗಲೇ 2.69 ಕೋಟಿ ಬಳಕೆ ಮಾಡಲಾಗಿದೆ. ಉಳಿದ ಅನುದಾನವನ್ನು ಬಳಕೆ ಮಾಡಬೇಕಾಗಿದೆ. ಶಾಲಾ ಕಾಂಪೌಂಡ್, ಅಂಗನವಾಡಿ ಕೇಂದ್ರ ಸೇರಿ ಇತರೆ ಕಾಮಗಾರಿಗಳನ್ನು ನರೇಗಾ ಯೋಜನೆಯಡಿಯಲ್ಲಿ ಮಾಡುವಂತೆ ಶಾಸಕರು ತಿಳಿಸಿದರು.

ಪಂಚಾಯತ್ ರಾಜ್ ಇಲಾಖೆ: ತಾಲೂಕಿನಲ್ಲಿ ಅನೇಕ ಕಾಮಗಾರಿಗಳು ಉಳಿಕೆ ಇದ್ದು, ಕೂಡಲೇ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಹಾಗೂ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸದಿದ್ದಲಿ ಅವರಿಗೆ ನೋಟಿಸ್ ನೀಡಿ ಮರು ಟೆಂಡರ್ ಮಾಡುವಂತೆ, ಅವೈಜ್ಞಾನಿಕವಾಗಿ ಸ್ತ್ರೀಶಕ್ತಿ ಭವನ ನಿರ್ಮಿಸಿದ್ದು, ಅದನ್ನು ಪೂರ್ಣಗೊಳಿಸುವಂತೆ ಶಾಸಕರು ಅಧಿಕಾರಿಗೆ ಸೂಚಿಸಿದರು.

ತಹಸೀಲ್ದಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ, ಆರಕ್ಷಕ ವೃತ್ತ ನಿರೀಕ್ಷಕರು, ಕೆಡಿಪಿ ಸದಸ್ಯರು ಆಗಾಗ ಪಟ್ಟಣದಲ್ಲಿರುವ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ತಿಳಿಸಿದರು.

ಕೆಡಿಪಿ ಸದಸ್ಯೆ ಇಂದಿರಮ್ಮ ಮಾತನಾಡಿ, ತಿರುಮಣಿ ಗ್ರಾಮದಲ್ಲಿರುವ ಪಶು ಸಂಗೋಪನೆ ಇಲಾಖೆಯ ಆಸ್ಪತ್ರೆಯ ಕಾಂಪೌಂಡನ್ನು ಕಂದಾಯ ಇಲಾಖೆಯವರು ನೆಲಸಮ ಮಾಡಿದ್ದು, ತಡೆಗೋಡೆ ಇಲ್ಲದಂತಾಗಿದೆ. ಇದು ಹೀಗೆ ಮುಂದುವರಿದರೆ ಆಸ್ಪತ್ರೆಗೆ ನೀಡಿರುವ ಜಾಗವನ್ನು ಮತ್ತೆ ವಾಪಸ್ ಪಡೆದುಕೊಳ್ಳುತ್ತೇವೆಂದು ತಿಳಿಸಿದ್ದು, ಕೂಡಲೇ ಅಧಿಕಾರಿಗಳು ಪರಿಶೀಲನೆ ಮಾಡಿ ನರೇಗಾ ಯೋಜನೆಯಡಿಯಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ತಹಶೀಲ್ದಾರ್ ಸಿಗ್ಬತ್‌ವುಲ್ಲಾ, ಇಒ ಎಂ.ನಾಗಮಣಿ, ಆರಕ್ಷಕ ವೃತ್ತ ನಿರೀಕ್ಷ ನಯಾಜ್ ಬೇಗ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಜೆಜೆಎಂ ಕಾಮಗಾರಿ ಮುಗಿಸಿ

ತಾಲೂಕಿನಲ್ಲಿ ಜೆಜೆಎಂ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆಗಳನ್ನು ಅಗೆಯುತ್ತಿರುವುದರಿಂದ ಕೆಟ್ಟ ಹೆಸರು ಬರುವಂತಾಗಿದೆ. ಆದ್ದರಿಂದ ಕಾಮಗಾರಿ ನಡೆದ ಎಲ್ಲ ಗ್ರಾಮಗಳಲ್ಲಿ ಸೀಮೆಂಟ್‌ನಿಂದ ರಸ್ತೆ ಸರಿಪಡಿಸಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜೆಇ ನವೀನ್‌ಗೆ ಸೂಚಿಸಿದರು.

ಪ್ರತಿ ಹಳ್ಳಿಯಲ್ಲೂ ನೀರಿನ ಘಟಕ

ತಾಲೂಕಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಮಾಹಿತಿ ಪಡೆದಿದ್ದು, ತಾಲೂಕಿನಲ್ಲಿರುವ 121 ಗ್ರಾಮಗಳ ಪೈಕಿ ಈಗಾಗಲೇ 100 ಗ್ರಾಮಗಳಲ್ಲಿ ಘಟಕಗಳಿದ್ದು, 15 ಘಟಕಗಳ ಕಾಮಗಾರಿ ಪ್ರಗತಿಯಲ್ಲಿವೆ. ಇನ್ನು 6 ಗ್ರಾಮಗಳಲ್ಲಿ ಘಟಕಗಳನ್ನು ಅಳವಡಿಸಿದರೆ ಪ್ರತಿಯೊಂದು ಹಳ್ಳಿಯಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಹೊಂದಿರುವ ತಾಲೂಕು ಗುಡಿಬಂಡೆ ಎಂದು ೋಷಣೆಯಾಗಲಿದೆ ಎಂದು ಶಾಸಕರಿಗೆ ತಿಳಿಸಿದರು. ಈಗಾಗಲೇ ಕೆಲ ಘಟಕಗಳ ಬಾಗಿಲು ಮುರಿದಿದ್ದು, ಸರಿಪಡಿಸುವಂತೆ ಶಾಸಕ ಸುಬ್ಬಾರೆಡ್ಡಿ ಸೂಚಿಸಿದರು.

ಕಂದಾಯ ಇಲಾಖೆ

ಕಂದಾಯ ಇಲಾಖೆಯ ಮಾಹಿತಿ ಕೇಳಿದ ಶಾಸಕರಿಗೆ ಬಗರ್‌ಹುಕುಂ ನಮೂನೆ 53ರಲ್ಲಿ ಮತ್ತು ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿದ್ದು, 30 ಅರ್ಜಿಗಳು ಕಮಿಟಿಯಲ್ಲಿಡಲು ಸಿದ್ಧಪಡಿಸಿದ್ದೇವೆಂದು ತಹಸೀಲ್ದಾರ್ ಸಿಗ್ಬತ್‌ವುಲ್ಲಾ ತಿಳಿಸಿದರು. ಕಲ್ಲು ಕ್ವಾರಿ ಮತ್ತು ಜಲ್ಲಿ ಕ್ರಷರ್‌ಗಳಿಂದ ಜನರಿಗೆ ಸಮಸ್ಯೆ ಆಗಿದ್ದು ಅವುಗಳನ್ನು ತಡೆಯಲು ತಹಸೀಲ್ದಾರ್ ಮತ್ತು ಆರಕ್ಷಕ ವೃತ್ತ ನಿರೀಕ್ಷಕರಿಗೆ ಶಾಸಕರು ಸೂಚನೆ ನೀಡಿದರು. ಇನ್ನು ನಕಲಿ ಅಂಗವಿಕಲ ಪ್ರಮಾಣ ಪತ್ರ ನೀಡುತ್ತಿರುವ ಬಗ್ಗೆ ದೂರು ಬಂದಿದ್ದು ಅವುಗಳನ್ನು ಪರಿಶೀಲಿಸಿ ಅರ್ಹರಿಗೆ ಮಾತ್ರ ಪ್ರಮಾಣ ಪತ್ರ ವಿತರಣೆ ಮಾಡಬೇಕೆಂದು ತಹಸೀಲ್ದಾರ್‌ಗೆ ಸೂಚಿಸಿದ್ದು, ಇನ್ನು ವೈದ್ಯಾಧಿಕಾರಿಗಳೂ ಪರಿಶೀಲನೆ ಮಾಡುವಾಗ ನ್ಯೂನ್ಯತೆಗಳನ್ನು ಪರಿಶೀಲನೆ ಮಾಡಬೇಕೆಂದು ಟಿಎಚ್‌ಒ ಡಾ.ನರಸಿಂಹಮೂರ್ತಿ ಅವರಿಗೆ ಸೂಚಿಸಿದರು.