ಜಿಲ್ಲೆ

ವೇಳಾಪಟ್ಟಿ ರಚಿಸಿ ಪರೀಕ್ಷೆಗೆ ತಯಾರಿ ನಡೆಸಿ

ಕೋಲಾರ ಡೆಸ್ಕ್

ಕೆಜಿಎಫ್​- ಸರಿಯಾದ ಯೋಜನೆ ಇಲ್ಲದೆ ಗುರಿ ತಲುಪಲು ಅಸಾಧ್ಯ, ಮುಂಬರುವ ಪರೀಕ್ಷೆಗಳಿಗೆ ಪರಿಣಾಮಕಾರಿಯಾಗಿ ತಯಾರಾಗಲು ಪ್ರತಿಯೊಬ್ಬ ವಿದ್ಯಾರ್ಥಿಯು ಮೊದಲು ಸರಿಯಾದ ಅಧ್ಯಯನ ವೇಳಾಪಟ್ಟಿ ರಚಿಸಿಕೊಂಡು ಪರೀೆಗೆ ತಯಾರಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್​.ರವಿ ಸಲಹೆ ನೀಡಿದರು.

ನಗರದ ಸಂತ ಮೇರಿಸ್​ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಪ್ರೇರಣಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪ್ರತಿ ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ಘಟ್ಟವಾಗಿದ್ದು, ಇಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರೆ ಮುಂದಿನ ಕೋರ್ಸ್​ಗಳಿಗೆ ಸುಲಭವಾಗಿ ಪ್ರವೇಶ ಪಡೆಯಲು ಸಾಧ್ಯ ಎಂದರು.

ಪಾಲಕರು ಮಕ್ಕಳಿಗೆ ವಿಶೇಷ ತರಗತಿಗಳು ಸೇರಿಸಿ ಆದ್ಯತೆ ನೀಡುತ್ತಾರೆ. ಈಗಾಗಲೇ ಪರೀೆ ವೇಳಾಪಟ್ಟಿ ಪ್ರಕಟಗೊಂಡಿರುವುದರಿಂದ ಸಾಮಾನ್ಯವಾಗಿ ಸಿಗುವ ಅಲ್ಪ ಸಮಯ ಮತ್ತು ಓದಿನ ರಜಾ ದಿನಗಳಲ್ಲಿ ಪರೀಕ್ಷೆ ಸಿದ್ಧತೆಗಳಿಗಾಗಿ ಒಂದು ವೇಳಾಪಟ್ಟಿ ತಯಾರಿಸಿ ಓದಲು ಶುರು ಮಾಡುವುದು ಉತ್ತಮ ಎಂದು ಕಿವಿ ಮಾತು ಹೇಳಿದರು.

ವಿಜ್ಞಾನ ಮತ್ತು ಗಣಿತದ ಕುರಿತು ಸರಳವಾಗಿ ಮನಮುಟ್ಟುವಂತೆ ಪರೀಕ್ಷೆ ಬರೆಯಲು ಸರಳ ಟಿಪ್ಸ್​ ನೀಡಿ ಪರೀಕ್ಷೆಯಲ್ಲಿ ನೀವು ಉತ್ತರ ಬರೆಯಬೇಕಾದರೆ ನಿಮ್ಮ ಉತ್ತರ ವೇಗದ ಬಗ್ಗೆ ಗಮನವಿರಲಿ. ಸಮಯ ವ್ಯರ್ಥವಾಗುತ್ತಿದೆ ಎಂಬುದರ ಮೇಲೆಯೂ ಅರಿವಿರಲಿ, ಹಾಗೆ ವೇಗದ ಗುಂಗಲ್ಲಿ ತಪ್ಪು ಉತ್ತರ ಬರೆಯದಂತೆ ಎಚ್ಚರವಿರಲಿ. ಉತ್ತರಿಸುವಾಗ ಸಣ್ಣ ತಪ್ಪಿಗೂ ಆಹ್ವಾನ ನೀಡದಿರಿ ಎಂದರು.

ಕೆಜಿಎಫ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಮಾತನಾಡಿ, ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳು ಭಯ ಬಿಡಬೇಕು. ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಗಳಿಸಲು ಸರಳ ತಂತ್ರಗಳನ್ನು ಅನುಸರಿಸಬೇಕು. ಪರೀಕ್ಷೆ ಬರೆಯುವ ಮೊದಲು ಪ್ರಶ್ನೆ ಪತ್ರಿಕೆ ಓದಿ ಅರ್ಥ ಮಾಡಿಕೊಳ್ಳಿ. ಉತ್ತರ ಬರೆಯುವ ಮೊದಲು ಎಷ್ಟು ಅಂಕಗಳಿಗೆ ಪ್ರಶ್ನೆ ಕೇಳಲಾಗಿದೆ, ಎಷ್ಟು ಉತ್ತರ ಬರೆಯಬೇಕು ಎಂದು ಮುಂಚಿತವಾಗಿ ಯೋಜನೆ ಹಾಕಿಕೊಳ್ಳಿ ಎಂದರು.

ಮಕ್ಕಳಿಗೆ 15 ನಿಮಿಷಗಳು ಪ್ರಶ್ನೆ ಪತ್ರಿಕೆ ಓದಿಕೊಳ್ಳಲು ಅವಕಾಶವಿದ್ದು, ನಂತರ ಸುಲಭವಾಗಿ ಉತ್ತರಿಸಬಹುದಾಗಿದ್ದು, ಕಠಿಣ ಎಂಬ ಪ್ರಶ್ನೆಗಳನ್ನು ವಿಂಗಡಿಸಿಕೊಳ್ಳಿ. ಮೊದಲು ಸಲಭ ಪ್ರಶ್ನೆಗಳಿಗೆ ಉತ್ತರಿಸಿ ನಂತರ ಕಠಿಣ ಪ್ರಶ್ನೆಗಳಿಗೆ ಆಲೋಚಿಸಿ ಉತ್ತರ ಬರೆಯಿರಿ, ಕಠಿಣ ಪ್ರಶ್ನೆಗಳು ಉತ್ತರ ನೆನಪಿಗೆ ಸಮಯ ತೆಗೆದುಕೊಳ್ಳುತ್ತವೆ ಎಂದರು.