ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ಕಲ್ಪಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಆರಂಭಗೊಂಡಿರುವ ಹೋರಾಟ ಬೆಂಬಲಿಸಿ 21 ರಂದು ಚಿತ್ರದುರ್ಗ ಜಿಲ್ಲೆಯಿಂದ 200 ಮಂದಿ ಹೊರಟಿದ್ದೇವೆ ಎಂದು ಲಿಂಗಾಯತ ಪಂಚಮಸಾಲಿ ಮಹಾಸಭಾದ ಗೌರವಾಧ್ಯಕ್ಷ ಎಸ್‌ಎಂಎಲ್ ತಿಪ್ಪೇಸ್ವಾಮಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು 6 ಬಾರಿ ಮಾತು ತಪ್ಪಿದ್ದಾರೆ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗಿದೆ. ಆದ್ದರಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಹೋರಾಟಕ್ಕೆ ಶಕ್ತಿ ತುಂಬಲು ‘ಮಾಡು ಇಲ್ಲವೆ ಮೀಸಲಾತಿ ಪಡೆದು ಮಡಿ’ ಎಂಬ ಘೋಷ ವಾಕ್ಯದೊಂದಿಗೆ ಸಜ್ಜಾಗಿದ್ದೇವೆ ಎಂದರು.
ಮೀಸಲು ನೀಡದಿದ್ದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಸಮುದಾಯದವರು ನಿರ್ಧರಿಸಿದ್ದಾರೆ. ಇದಕ್ಕೆ ಆಸ್ಪದ ನೀಡದೆಯೇ ಬೇಡಿಕೆ ಈಡೇರಿಸಬೇಕು. ಅಧಿಕಾರಕ್ಕೆ ಬರುವಲ್ಲಿ ವೀರಶೈವ ಲಿಂಗಾಯತ ಅದರಲ್ಲೂ ರಾಜ್ಯದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮುದಾಯದ ಕೊಡುಗೆ ಮರೆಯಬಾರದು ಎಂದು ಹೇಳಿದರು.
ಮೀಸಲು ನಮ್ಮ ಹಕ್ಕಾಗಿದ್ದು, ಅದನ್ನು ಪಡೆಯಲು ಎರಡು ದಶಕಗಳಿಂದ ಪ್ರಯತ್ನಿಸುತ್ತಿದ್ದೇವೆ. ಅದನ್ನು ಪಡೆಯುವವರೆಗೂ ಹೋರಾಟ ಮುಂದುವರಿಯಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ತೀವ್ರ ಸ್ವರೂಪ ಪಡೆಯಲಿದೆ ಎಂದರು.
ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಸಿ.ಗಂಗಾಧರಪ್ಪ, ಯುವ ಘಟಕದ ಜಿಲ್ಲಾಧ್ಯಕ್ಷ ಎಚ್.ಎಂ.ಮಂಜುನಾಥ್, ಗ್ರಾಪಂ ಸದಸ್ಯ ತಿಪ್ಪೇಸ್ವಾಮಿ, ಮುಖಂಡರಾದ ಎಸ್.ಟಿ.ನವೀನ್‌ಕುಮಾರ್, ಬಿವಿಕೆಎಸ್ ಕಾರ್ತಿಕ್, ಎಂ.ಎಸ್. ಗಿರೀಶ್, ಮನು ತಮಟಕಲ್ಲು, ಎಲ್.ಎಂ.ವಿಜಯ್‌ಕುಮಾರ್ ಇತರರಿದ್ದರು.