ಜಮಖಂಡಿ: ನಗರದಲ್ಲಿ ಸುಗಮ ಸಂಚಾರಕ್ಕೆ, ನಗರದಲ್ಲಿನ ವಾಹನ ದಟ್ಟನೆ, ಜನದಟ್ಟನೆ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾೃನ್ ಮಾಡಬೇಕೆಂದು ನಾಗರಿಕರು ಸಭೆಯಲ್ಲಿ ಒತ್ತಾಯಿಸಿದರು.
ಸ್ಥಳೀಯ ನಗರಸಭೆ ಸಭಾಭವನದಲ್ಲಿ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ 2025-26ನೇ ಸಾಲಿನ ಆಯ-ವ್ಯಯ ತಯಾರಿಕೆ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಮನವಿ ಮಾಡಿದರು.
ಲಕ್ಷಾಂತರ ಸಂಖ್ಯೆಯಲ್ಲಿ ನಗರ ಪ್ರದೇಶದಲ್ಲಿ ಜನಸಂಖ್ಯೆ ಇದೆ. ಪ್ರತಿದಿನ ನಗರದ ಮಾರುಕಟ್ಟೆ ಸೇರಿ ಪ್ರಮುಖ ರಸ್ತೆಗಳಲ್ಲಿ ಜನದಟ್ಟನೆ, ವಾಹನ ದಟ್ಟನೆಯಿಂದಾಗಿ ತೊಂದರೆ ಉಂಟಾಗುತಿದೆ. ನಗರ ಸೌಂದರೀಕರಣಕ್ಕೆ ಮಾಸ್ಟರ್ ಪ್ಲಾೃನ್ ಅವಶ್ಯಕವಾಗಿದೆ ಎಂದರು.
ಪೌರಾಯುಕ್ತ ಜ್ಯೋತಿ ಗೀರಿಶ ಮಾತನಾಡಿ, ಬರುವ ದಿನಗಳಲ್ಲಿ ಮಾಸ್ಟರ್ ಪ್ಲಾೃನ್ ಕುರಿತು ಯೋಜನೆ ರೂಪಿಸಲಾಗುವುದು. ನಗರದ ಸೌಂದರ್ಯ, ಮೂಲ ಸೌಕರ್ಯ, ಹಿಂದು ಸ್ಮಶಾನ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಜೆಟ್‌ನಲ್ಲಿ ಇಡಲಾಗುವುದು ಎಂದು ತಿಳಿಸಿದರು.
ರಾಜು ಮಸಳಿ ಮಾತನಾಡಿ, ನಗರದಲ್ಲಿನ ರಸ್ತೆಗಳನ್ನು ದುರಸ್ತಿ ಮಾಡಿಸಿ, ಚೌಡಯ್ಯ ನಗರದಲ್ಲಿ ಒಳಚರಂಡಿ ನಿರ್ಮಿಸಬೇಕು, ನೀರು ಶುದ್ಧೀಕರಣ ಘಟಕದಲ್ಲಿ ಸಾರ್ವಜನಿಕರು ಪ್ರವೇಶ ಮಾಡದಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಬಿ.ಎಸ್. ಮಠಪತಿ ಮಾತನಾಡಿ, ನಗರದ ಹೊರವಲಯದಲ್ಲಿರುವ ಕುಂಬಾರಹಳ್ಳ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಲೇಔಟ್ ಗಳನ್ನು ನಗರಸಭೆಗೆ ಹಸ್ತಾಂತರ ಮಾಡಿಕೊಳ್ಳಬೇಕು. ಅದರ ಆದಾಯ ನಗರಸಭೆಗೆ ಹೆಚ್ಚಾಗುತ್ತದೆ. ನಗರಸಭೆಗೆ ಸಂಬಂಧಿಸಿದ ಕಾಂಪ್ಲೆಕ್ಸ್‌ಗಳ ಡಿಪಾಜಿಟ್ ಕಡಿಮೆ ಮಾಡಬೇಕು. ಸಾಮಾನ್ಯ ಜನರಿಗೆ ಅನುಕೂಲವಾಗುತ್ತದೆ ಎಂದರು.
ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿದರೆ ಆದಾಯ ಬರುತ್ತದೆ. ನಗರಸಭೆಯಲ್ಲಿ ಕ್ಯಾಶ್ ಕೌಂಟರ್ ಆರಂಭ, ಪರಶುರಾಮ ಉದ್ಯಾನವನ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದರು.
ವಿಜಯ ಕಟಗಿ ಮಾತನಾಡಿ, ನಗರದಲ್ಲಿ ಮಹಿಳೆಯರಿಗೆ ಶೌಚಗೃಹ ನಿರ್ಮಿಸಬೇಕು. ನಗರದ ಪೆಟ್ರೋಲ್ ಪಂಪ್, ಆಸ್ಪತ್ರೆ, ಹೋಟೆಲ್‌ಗಳಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸುವಂತೆ ಕ್ರಮ ತೆಗೆದುಕೊಳ್ಳಿ ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಬಿ.ಎಂ. ನುಚ್ಚಿ ಮಾತನಾಡಿ, ಮೈಗೂರ ಕಾಲನಿಯಲ್ಲಿ ಸಮರ್ಪಕ ನೀರು ಪೂರೈಸಬೇಕು. ನಡುರಸ್ತೆಯಲ್ಲಿನ ವಿದ್ಯುತ್ ಕಂಬ ಸ್ಥಳಾಂತರಿಸಬೇಕು. ರಸ್ತೆಗಳನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.
ಅಬುಬಕರ ಕುಡಚಿ ಮಾತನಾಡಿ, ನಗರದ ಹೊರವಲಯದಲ್ಲಿರುವ ಇಂಡಸ್ಟ್ರೀಯಲ್ ಏರಿಯಾವನ್ನು ನಗರಸಭೆಗೆ ಹಸ್ತಾಂತರ ಮಾಡಿಕೊಂಡರೆ ನಗರಸಭೆಗೆ ಆದಾಯ ಹೆಚ್ಚಾಗುತ್ತದೆ ಎಂದರು. ನಿಲೇಶ ಹಜಾರೆ ಸೇರಿ ನಾಗರಿಕರು ಸಲಹೆ ಸೂಚನೆ ನೀಡಿದರು.