ಹಾವೇರಿ: ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು ಜಿಲ್ಲಾದ್ಯಂತ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯ ನದಿ ತೀರದ ಪುಣ್ಯಸ್ಥಳಗಳಲ್ಲಿ ಮಿಂದು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ‘ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ’ ಎಂದು ಕುಟುಂಬದ ಸದಸ್ಯರು, ಇತರರಿಗೆ ಎಳ್ಳುಬೆಲ್ಲ ಬೀರಿ ಶುಭಾಶಯ ಕೋರಿದರು.
ಹಾವೇರಿ ತಾಲೂಕು ನರಸೀಪುರ, ಚೌಡಯ್ಯದಾನಪುರ, ಕಂಚಾರಗಟ್ಟಿ, ಹಾವನೂರ, ಗಳಗನಾಥ ಬಳಿಯ ತುಂಗಾತೀರದಲ್ಲಿ, ಕರ್ಜಗಿ ಬಳಿಯ ವರದಾ ನದಿಯಲ್ಲಿ, ವರದಾ ಹಾಗೂ ಧರ್ವ ನದಿ ಸಂಗಮದ ಕೂಡಲದಲ್ಲಿ, ಶಿಗ್ಗಾಂವಿ ತಾಲೂಕಿನ ದಕ್ಷಿಣಕಾಶಿ ಗಂಗೆಬಾವಿಯಲ್ಲಿ, ಹಿರೇಕೆರೂರು ತಾಲೂಕಿನ ಮದಗ ಮಾಸೂರು ಕೆರೆಯಲ್ಲಿ, ಹಿರೇಕೆರೂರಿನ ದುರ್ಗಾದೇವಿ ಕೆರೆಯಲ್ಲಿ ಸಾವಿರಾರು ಜನರು ಮಕರ ಸಂಕ್ರಮಣದ ಅಂಗವಾಗಿ ಪುಣ್ಯಸ್ನಾನ ಮಾಡಿದರು.
ಬ್ಯಾಡಗಿ ತಾಲೂಕು ಕದರಮಂಡಲಗಿ, ಕಾಗಿನೆಲೆ, ದೇವರಗುಡ್ಡ, ಶಿಶುವಿನಹಾಳ ಶರೀಫಗಿರಿ, ಹಾವನೂರ ಗ್ರಾಮದೇವತೆ, ಕಾರಡಗಿ ವೀರಭದ್ರೇಶ್ವರ ದೇವಸ್ಥಾನ, ಹಾವೇರಿಯ ಪುರಸಿದ್ಧೇಶ್ವರ ಸೇರಿದಂತೆ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಆವರಣ, ನದಿ ತೀರ ಹಾಗೂ ಪ್ರೇಕ್ಷಣೀಯ ಸ್ಥಳ, ಹೊಲ-ಗದ್ದೆಗಳಲ್ಲಿ ಕುಟುಂಬ ಸಮೇತ ಸಹಭೋಜನ ಸವಿದು ಸಂಭ್ರಮಿಸಿದರು.