ಜಿಲ್ಲೆ

ಬದುಕಿಗೆ ಚೈತನ್ಯ ಕೊಡುವ ಸಾಹಿತ್ಯ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ

reportermys

ಮಂಡ್ಯ: ಜೀವನದಲ್ಲಿ ಗ್ರಹಿಸುವ ಸಾಹಿತ್ಯ, ಕಲೆ ಮತ್ತು ನಾಟಕ ಬದುಕಿಗೆ ಚೈತನ್ಯ ದೊರಕುತ್ತದೆ. ಮಾತ್ರವಲ್ಲದೆ ನಮ್ಮೊಳಗಿನ ವ್ಯಕ್ತಿತ್ವ ಕಟ್ಟಿಕೊಡುವಲ್ಲಿ ಸಹಾಯಕವಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕರ್ನಾಟಕ ಸಂಘ, ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ ಕೇಂದ್ರ ಹಾಗೂ ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ ವತಿಯಿಂದ ಆಯೋಜಿಸಿದ್ದ ‘ಮಕ್ಕಳಿಂದ ಮಕ್ಕಳಿಗಾಗಿ ನಾಟಕ ಹಾಗೂ ಮೂಡಲಪಾಯ ಯಕ್ಷಗಾನ ರೆಪರ್ಟರಿ’ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಹಾತ್ಮ ಗಾಂಧೀಜಿ ಅವರು ಸತ್ಯಹರಿಶ್ಚಂದ್ರ ನಾಟಕವನ್ನು ನೋಡಿ ಕಳ್ಳತನ ಮಾಡುವುದನ್ನು, ಸುಳ್ಳು ಹೇಳುವುದನ್ನು ಬಿಟ್ಟರು. ಗಾಂಧೀಜಿ ನೋಡಿದ ಒಂದು ನಾಟಕದಿಂದಾದ ಮನಪರಿವರ್ತನೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಶಕ್ತಿಯನ್ನು ಬೆಳೆಸಿತು ಎಂದು ಬಣ್ಣಿಸಿದ ಅವರು, ಬಾಲ್ಯದ 15-20 ವರ್ಷಗಳಲ್ಲಿ ರೂಢಿಸಿಕೊಳ್ಳುವ ಅಭ್ಯಾಸದಿಂದ 80 ವರ್ಷಗಳ ಬದುಕು ಸುಂದರವಾಗುತ್ತದೆ. ಮನಸ್ಸನ್ನು ಸಮಾಜ ಕಟ್ಟುವ ಕಡೆಗೆ ತಿರುಗಿಸದಿದ್ದರೆ, ನಮ್ಮ ಕೆಟ್ಟ ಮನಸ್ಸು ಮಹಾಭಾರತದ ಕುರುಕ್ಷೇತ್ರವನ್ನು ಸೃಷ್ಟಿಸಿ ಸ್ಮಶಾನ ಮಾಡುತ್ತದೆ ಎಂದು ನಾಟಕದ ಮಹತ್ವವನ್ನು ವಿವರಿಸಿದರು. ನಾಟಕವನ್ನು ನೋಡಿ ಅಲ್ಲಿನ ಹೊಸತನ್ನು ಒಳಗೆ ಬಿಟ್ಟುಕೊಂಡು ನಮ್ಮೊಳಗಿನ ಶಕ್ತಿ ಜಾಗೃತವಾಗಿ ವ್ಯಕ್ತಿತ್ವ ಕಟ್ಟಿಕೊಡುವಲ್ಲಿ ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಓದು ಎಷ್ಟು ಮುಖ್ಯವೋ, ಕಲೆ-ಸಂಸ್ಕೃತಿ ನಾಟಕಗಳಂತಹ ಪಠ್ಯೇತರ ಚಟುವಟಿಕೆಗಳು ಸಹ ಅತ್ಯಮೂಲ್ಯ. ಇದರಿಂದ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ಪಠ್ಯೇತರ ಚಟುವಟಿಕೆಗಳು ಉತ್ತಮ ನಾಗರಿಕರಾಗಿ ರೂಪುಗೊಂಡು ಸ್ವಸ್ಥ ಸಮಾಜ ನಿರ್ಮಿಸಲು ಪೂರಕವಾಗುತ್ತದೆ. ಇಂದಿನ ಮೊಬೈಲ್ ಮತ್ತು ಇಂಟರ್‌ನೆಟ್ ಹಾವಳಿಯಲ್ಲಿ ಯುವಕರು ಓದುವ ಮತ್ತು ಇತರ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಶೈಕ್ಷಣಿಕ ಅಭ್ಯಾಸ ಬಿಟ್ಟು ಕಲೆ-ಸಂಸ್ಕೃತಿ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರುವುದಿಲ್ಲ. ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಆಶಾದಾಯಕ. ಯಕ್ಷಗಾನ ಎಂದರೆ ದಕ್ಷಿಣಕನ್ನಡ, ಉಡುಪಿಗೆ ಸೀಮಿತ ಎಂದುಕೊಳ್ಳದೆ ಕರ್ನಾಟಕದ ಎಲ್ಲ ಭಾಗಗಳಿಗೂ ಪರಿಚಯಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರಯತ್ನ ಅಭಿನಂದನೀಯ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಮಾತನಾಡಿದರು. ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಶಾಂತ ಎಲ್.ಹುಲ್ಮನಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ತಗ್ಗಹಳ್ಳಿ ವೆಂಕಟೇಶ್, ಹರೀಶ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಟಿ.ಚಂದ್ರಕಾಂತ, ಕೆ.ಟಿ.ಸೌಭಾಗ್ಯ, ಶಶಿಧರ್ ಉಪಸ್ಥಿತರಿದ್ದರು.

ಸಮಾರಂಭದ ನಂತರ ಮಕ್ಕಳಿಂದ ಮಕ್ಕಳಿಗಾಗಿ ನಾಟಕ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದ ಸದ್ವಿದ್ಯಾ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಕವಿ ಕುವೆಂಪು ವಿರಚಿತ ‘ಸ್ಮಶಾನ ಕುರುಕ್ಷೇತ್ರಂ’ ನಾಟಕ ಪ್ರದರ್ಶನ ನಡೆಯಿತು. ಇನ್ನೂ ಎರಡು ದಿನಗಳ ಕಾಲ ನಾಟಕ ಪ್ರದರ್ಶನ ನಡೆಯಲಿದೆ.