ಹುಬ್ಬಳ್ಳಿ: ಕಾಲೇಜು ಕ್ಯಾಂಪಸ್ನಲ್ಲಿ ಎಂಸಿಎ ವಿದ್ಯಾರ್ಥಿನಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ್ ಹಿರೇಮಠ್ ಅವರ ಪುತ್ರಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಫಯಾಜ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಇತ್ತ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ಬಿವಿಬಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕಳೆದ ಕೆಲ ದಿನಗಳಿಂದ ಪ್ರೀತಿಸುವಂತೆ ನೇಹಾಳ ಹಿಂದೆ ಬಿದ್ದು ಪೀಡಿಸುತ್ತಿದ್ದ. ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಸಿಟ್ಟುಗೊಂಡ ಆರೋಪಿ ಫಯಾಜ್ ನೇಹಾಳ ಕುತ್ತಿಗೆ ಸೇರಿದಂತೆ ದೇಹದ 9 ಕಡೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಪ್ರಸಾದ್ ಅಬ್ಬಯ್ಯ, ನೇಹಾ ತುಂಬಾ ಸಂಕೋಚದ ಸ್ವಭಾವದವಳಾಗಿದ್ದಳು, ಅವರ ಕುಟುಂಬದವರು ಆಕೆಗೆ ಮದುವೆ ಮಾಡುವ ಉದ್ದೇಶ ಹೊಂದಿದ್ದರು. ಉನ್ನತ ವ್ಯಾಸಂಗ ಮಾಡಲಿ ಅಂತ ಕಾಲೇಜಿಗೆ ಸೇರಿಸಿದ್ದರು. ಅಷ್ಟರೊಳಗೆ ಈ ಕೃತ್ಯ ನಡೆದು ಹೋಗಿದೆ. ಕಾಲೇಜಿನೊಳಗೆ ರಕ್ಷಣೆ ಇಲ್ಲಂದರೆ ಬೇರೆ ಕಡೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಕೊಲೆ ಮಾಡಿರುವ ಆರೋಪಿಯನ್ನ ಬಂಧನ ಮಾಡಲಾಗಿದೆ. ನಿರಂಜನ ಹಿರಮೇಠ ನಮ್ಮ ಪಕ್ಷದ ಪಾಲಿಕೆ ಸದಸ್ಯರು. ಬಹಳ ಒಳ್ಳೆಯ ಹುಡಗಿ,ಯಾವಾಗಲೂ ಅಂಕಲ್ ಎಂದು ಕರೆಯುತ್ತಿದ್ದಳು. ಹುಬ್ಬಳ್ಳಿಯಲ್ಲಿ ಹೀಗಾಗಬಾರದಿತ್ತು ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.