ಜಿಲ್ಲೆ

ಬದುಕಿನಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲಿ: ಜಿಲ್ಲಾಧಿಕಾರಿ ಡಾ.ಕುಮಾರ ಕಿವಿಮಾತು

ಕೆ.ಎನ್.ರಾಘವೇಂದ್ರ

ಮಂಡ್ಯ: ಕ್ರೀಡಾ ಮನೋಭಾವನೆಯನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೇರಾ ಯುವ ಭಾರತ್ ಸಹಯೋಗದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದೇಹ ಸದೃಢವಾಗಿದ್ದರೆ ಮನಸ್ಸು ಕೂಡ ಸದೃಢವಾಗಿರುತ್ತದೆ. ಆದ್ದರಿಂದ ಮಾನಸಿಕ, ದೈಹಿಕ ಹಾಗೂ ಸದೃಢವಾಗಿ ಬದುಕಲು ಪ್ರತಿಯೊಬ್ಬರೂ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

ನಮ್ಮನ್ನು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ಬದುಕಿನಲ್ಲಿ ಶಿಸ್ತು ಹಾಗೂ ನೈತಿಕತೆಯ ಮೌಲ್ಯ ಕಾಣಬಹುದು. ಪ್ರತಿಯೊಂದು ಕ್ರೀಡೆಯು ತನ್ನದೇ ಆದ ಮೆರಗು ಹಾಗೂ ನಿಯಮ ಹೊಂದಿದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಕ್ರೀಡಾ ನಿಯಮಗಳನ್ನು ಪಾಲಿಸುವುದರಿಂದ ಆರೋಗ್ಯಕರ ಜೀವನವನ್ನು ನಡೆಸಬಹುದು. ಸ್ಪರ್ಧೆಯಲ್ಲಿ ವಿಜೇತರಾಗುವುದಕ್ಕಿಂತ ಭಾಗವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಮನಸ್ಸು ನಿಶ್ಚಲವಾಗಿರಬೇಕೆಂದರೆ ದೇಹವನ್ನು ದಂಡಿಸಬೇಕು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಅನೇಕ ಕ್ರೀಡಾ ಮೌಲ್ಯಗಳನ್ನು ಕಲಿಯಬಹುದು ಹಾಗೂ ಸದೃಢವಾಗಿ ಬದುಕಬಹುದು ಎಂದರು.

ಪ್ರಸ್ತುತ ಸಮಾಜದಲ್ಲಿ ಜೀವನದ ಕ್ರಮಗಳು ಅವ್ಯವಸ್ಥೆಯಿಂದ ಕೂಡಿದೆ. ಮನಸ್ಸೋಇಚ್ಛೆ ಸೇವಿಸುವ ಆಹಾರದಿಂದ ಆರೋಗ್ಯ ಉತ್ತಮವಾಗಿರುವುದಿಲ್ಲ. ಹಾಗಾಗಿ ಜೀವನದ ಕ್ರಮದಲ್ಲಿ ಶಿಸ್ತಿನ ಅವಶ್ಯಕತೆಯಿದೆ. ಬದುಕಿನಲ್ಲಿ ಒಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಆತನ ಶಿಸ್ತು ಮಹತ್ತರ ಪಾತ್ರ ವಹಿಸಿರುತ್ತದೆ. ಬದುಕಿನಲ್ಲಿ ಮತ್ತು ಆಹಾರ ಪದ್ಧತಿಯಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.

ಹಾಕಿ ಕ್ಷೇತ್ರದಲ್ಲಿ ವಿಶ್ವವೇ ತಿರುಗಿ ನೋಡುವಂತೆ ಸಾಧನೆ ಮಾಡಿದ ಮಹಾನ್ ಹಾಕಿ ಕ್ರೀಡಾಪಟು ಮೇಜರ್ ಧ್ಯಾನ್ ಚಂದ್. ಅವರು ಕ್ರೀಡಾಪಟುವಾಗಿದ್ದಂತಹ ಸಂದರ್ಭದಲ್ಲಿ ಕ್ರೀಡಾಕ್ಷೇತ್ರವನ್ನು ಚಿನ್ನದಯುಗ ಎಂದು ಕರೆಯಲಾಗುತಿತ್ತು. ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದ ಹಿರಿಮೆಯೂ ಅವರಿಗೆ ಸಲ್ಲುತ್ತದೆ. ಭಾರತವಲ್ಲದೆ ಇತರೆ ದೇಶಗಳು ಸಹ ಅವರ ಸಾಧನೆಯನ್ನು ಗುರುತಿಸುವಂತಹ ಇತಿಹಾಸವನ್ನು ಅವರು ಸೃಷ್ಟಿಸಿದ್ದಾರೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಓಂಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು, ಮುಖ್ಯ ಶಿಕ್ಷಕಿ ಡಾ.ಮಂಗಳಾ ಇತರರಿದ್ದರು. ಇದೇ ಸಂದರ್ಭದಲ್ಲಿ ಕ್ರೀಡಾ ದಿನಾಚರಣೆ ಅಂಗವಾಗಿ ಪ್ರಮಾಣ ವಚನ ಭೋದಿಸಲಾಯಿತು.