ಬಂಟ್ವಾಳ: ಪಾಲಕರು ಶಾಲೆಯ ಭೌತಿಕ ಅಭಿವೃದ್ಧಿ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿ ಮುಖ್ಯ ಪಾತ್ರರಾಗಿರುತ್ತಾರೆ. ಕೇವಲ ಶಿಕ್ಷಕರು ವಿದ್ಯಾರ್ಥಿಗಳ ಬೆಳವಣಿಗೆಗೆ ಕಾರಣಕರ್ತ ಆಗಲಾರ ಜತೆಗೆ ಪಾಲಕರ ಉತ್ತಮ ಸಹಕಾರ ಮತ್ತು ಉತ್ತಮ ಬಾಂಧವ್ಯವನ್ನು ಬೆಳೆಸಿದಾಗ ವಿದ್ಯಾರ್ಥಿಗಳು ಹಾಗೂ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಲ್ಲಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಅಬುಬಕ್ಕರ್ ಅಶ್ರಫ್ ಹೇಳಿದರು.
ವೀರಕಂಬ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮಜಿಯಲ್ಲಿ ನಡೆದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಉದ್ದೇಶಿಸಿ ಮಾತನಾಡಿದರು.
ಪ್ರತಿ ಶಾಲೆಯಲ್ಲಿ ಉತ್ತಮವಾದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ರಚನೆಗೊಂಡು ಎಲ್ಲ ರೀತಿಯ ಕೆಲಸಗಳನ್ನು ನಿರ್ವಹಿಸಿದಾಗ ಉತ್ತಮ ಫಲಿತಾಂಶ ದೊರಕುತ್ತದೆ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಆಯಾ ಶಾಲೆಯ ಭೌತಿಕ ಅಭಿವೃದ್ಧಿಗೆ ಪೂರಕವಾದ ಮೆಟ್ಟಿಲುಗಳಾಗಿವೆ ಹಾಗೂ ಉತ್ತಮ ಫಲಿತಾಂಶವನ್ನು ಹೊಂದುವಲ್ಲಿ ಸಫಲವಾಗಿದೆ ಎಂದು ತಿಳಿಸಿದರು.
ವೀರಕಂಬ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಬೆನೆಡಿಕ್ಟ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ದೈಹಿಕ ಶಿಕ್ಷಕ ಇಂದುಶೇಖರ್ ವಂದಿಸಿ, ಸಹ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ.ನಿರೂಪಿಸಿದರು.