ಚಿಕ್ಕೋಡಿ: ತಾಲೂಕಿನ ಮಜಲಟ್ಟಿಯಲ್ಲಿ ಚಿಕ್ಕೋಡಿ ಪಟ್ಟಣದ ಖಾಸಗಿ ವೈದ್ಯರ ಸಹಕಾರದಿಂದ 20 ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು 2-3 ದಿನಗಳ ಒಳಗೆ ಆರಂಭಿಸಲಾಗುವುದು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾಹಿತಿ ನೀಡಿದ್ದಾರೆ.
ಪಟ್ಟಣದ ಉಪವಿಭಾಗೀಯ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಖಾಸಗಿ ವೈದ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಂಟಾಗುತ್ತಿರುವ ಕೋವಿಡ್-19 ಸೋಂಕಿತರ ಒತ್ತಡ ನಿಯಂತ್ರಣಕ್ಕೆ ಖಾಸಗಿ ವೈದ್ಯರು ಚಿಕಿತ್ಸೆ ನೀಡಲು ಮುಂದೆ ಬರಬೇಕು. ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದರು.
ಬಳಿಕ ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ತಾಲೂಕಿನ ಮಜಲಟ್ಟಿಯಲ್ಲಿರುವ ವಸತಿ ನಿಲಯಕ್ಕೆ ಭೇಟಿ ನೀಡಿ ಕೋವಿಡ್-19 ಆಸ್ಪತ್ರೆ ಆರಂಭಿಸಲು ಸೂಕ್ತ ಸ್ಥಳ ಪರಿಶೀಲಿಸಿದರು. ಎಸಿ ರವೀಂದ್ರ ಕರಲಿಂಗಣ್ಣವರ ಮಾತನಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಖಾಸಗಿ ವೈದ್ಯರ ಮನವೊಲಿಸಿ ಖಾಸಗಿ ಕೋವಿಡ್-19 ಆಸ್ಪತ್ರೆ ಆರಂಭಿಸಲು ಮುತುವರ್ಜಿ ವಹಿಸಿದ್ದಾರೆ ಎಂದರು. ತಹಸೀಲ್ದಾರ್ ಸುಭಾಷ ಸಂಪಗಾವಿ ಟಿಎಚ್‌ಒ ಡಾ.ವಿ.ವಿ.ಶಿಂಧೆ, ಪೌರಾಯುಕ್ತ ಮಹಾವೀರ, ಪುರಸಭೆ ಮುಖ್ಯಾಧಿಕಾರಿ ಡಾ.ಸುಂದರ ಆರ್., ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಡಿವೈಎಸ್‌ಪಿ ಮನೋಜ ಪಾಟೀಲ, ಸಂಜಯ ಅರಗೆ, ಖಾಸಗಿ ವೈದ್ಯರು ಉಪಸ್ಥಿತರಿದ್ದರು.