ಕುಕನೂರು: ಮೆಕ್ಕೆಜೋಳ ಮಾರಾಟ ಮಾಡಿ ಉತ್ಸಾಹದಿಂದ ದೀಪಾವಳಿ ಆಚರಿಸಬೇಕಿದ್ದ ರೈತರು ಬೆಲೆ ಇಳಿಕಿಯಿಂದ ಕಂಗಾಲಾಗಿದ್ದಾರೆ.
ತಾಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ ಸಾವಿರಾರು ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಈಗಾಗಲೇ ಹಲವು ರೈತರು ಕಟಾವು ಮಾಡಿ, ರಾಶಿಯನ್ನು ಒಣಗಿಸಿ ಮಾರುಕಟ್ಟೆಗೆ ಕಳುಹಿಸಲು ಮುಂದಾಗುತ್ತಿದ್ದಾರೆ. ಆದರೆ, ಬೆಲೆ ಕುಸಿತದಿಂದ ಸಂಕಷ್ಟ ಎದುರಿಸಬೇಕಾಗಿದೆ.
ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿತಗೊಂಡಿದೆ. ಆದರೂ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುತ್ತಿಲ್ಲ. ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಮೆಕ್ಕಜೋಳಕ್ಕೆ 2,400 ರೂ. ಘೋಷಣೆ ಮಾಡಿದೆ. ಆದರೆ, ಇದುವರೆಗೂ ಅಧಿಕಾರಿಗಳು ಖರೀದಿಗೆ ಮುಂದಾಗುತ್ತಿಲ್ಲ.
ತಾಲೂಕಿನ ಕುಕನೂರು ಹಾಗೂ ಮಂಗಳೂರು ಹೋಬಳಿ ವ್ಯಾಪ್ತಿಯ10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಕಟಾವು ಕಾರ್ಯ ಕೂಡ ನಡೆಯುತ್ತಿದೆ.
ಹೆದ್ದಾರಿ ಸೇರಿದಂತೆ ಸಿಸಿ ರಸ್ತೆಗಳಲ್ಲಿ ಮೆಕ್ಕೆಜೋಳ ಒಣಗಿಸಿ ಮಾರುಕಟ್ಟೆಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದು, ಬೆಲೆ ಕುಸಿತದಿಂದ ವ್ಯಾಪಾರಸ್ಥರು ಕೂಡ ರೈತರ ಬಳಿ ಸುಳಿಯುತ್ತಿಲ್ಲ. ಪ್ರತಿ ವರ್ಷ ಈ ಸಮಯದಲ್ಲಿ ಪ್ರತಿ ಕ್ವಿಂಟಾಲ್‌ಗೆ 2,300 ರಿಂದ 2,400 ರೂ. ವರೆಗೆ ಬೆಲೆ ದೊರೆಯುತ್ತಿತ್ತು. ಈ ಬಾರಿ ಕ್ವಿಂಟಾಲ್‌ಗೆ ಕೇವಲ 1,800 ರೂ. ರಿಂದ 1,880 ರೂ.ಗೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ಖರೀದಿದಾರರು ಬಾರದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಮೆಕ್ಕೆಜೋಳ ಕಾಯುತ್ತಾ ದೀಪಾವಳಿ ಹಬ್ಬ ಆಚರಿಸುವ ಸ್ಥಿತಿ ನಿರ್ಮಾಣಗೊಂಡಿದೆ.
ರೈತರು ಪ್ರತಿ ಎಕರೆಗೆ ಮೆಕ್ಕೆಜೋಳ ಬಿತ್ತನೆ ಹಾಗೂ ಕಟಾವು ಮಾಡುವವರೆಗೂ 15 ಸಾವಿರ ರೂ. ಖರ್ಚು ಮಾಡಬೇಕಾಗುತ್ತದೆ. ಆದರೆ, ಪ್ರತಿ ಎಕರೆಗೆ ಉತ್ತಮ ಇಳುವರಿ ಬಂದರೂ 14 ರಿಂದ 15 ಕ್ವಿಂಟಾಲ್ ಬರುತ್ತದೆ. ಈ ಬಾರಿ ಬೆಲೆ ಕುಸಿತದಿಂದ ರೈತರು ಖರ್ಚು ಮಾಡಿದ ಹಣ ಕೂಡ ದೊರೆಯದ ಸ್ಥಿತಿ ಇದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಈಗಾಗಲೇ ಜಿಲ್ಲಾಧಿಕಾರಿಗೆ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಲು ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಕೇಂದ್ರ ತೆರೆದಿಲ್ಲ. ಅಂದಪ್ಪ ಕೋಳೂರು ರೈತ ಸಂಘದ ರಾಜ್ಯ ಉಪಾಧ್ಯಕ್ಷ, ಯರೇಹಂಚಿನಾಳ