ಕೊಟ್ಟೂರು: ತಾಲೂಕಿನಲ್ಲಿ ಸಕಾಲಕ್ಕೆ ಮಳೆಬಾರದೆ 10 ರಿಂದ 12 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬೆಳೆ ನೆಲಕಚ್ಚಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ಯಾಂಸುಂದರ್ ಹೇಳಿದ್ದಾರೆ.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ವಿಜಯವಾಣಿಯೊಂದಿಗೆ ಮಾತನಾಡಿದರು. ಇನ್ನು ಒಂದು ವಾರದೊಳಗೆ ಮಳೆಯಾಗದಿದ್ದರೆ ಮೆಕ್ಕೆಜೋಳ ನಷ್ಟದ ಪ್ರಮಾಣ ಸುಮಾರು 15 ಸಾವಿರ ಹೆಕ್ಟೇರ್‌ಗೆ ಏರಲಿದೆ ಎಂದರು.
ತಾಲೂಕಿನಲ್ಲಿ ಒಟ್ಟು 28 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದೆ. ಮೆಕ್ಕೆಜೋಳ ನಷ್ಟ ಪ್ರಮಾಣದ ಸಮೀಕ್ಷೆಯನ್ನು ವಿಶೇಷ ಆ್ಯಪ್ ಮೂಲಕ ತಾಲೂಕಿನ ತೂಲಹಳ್ಳಿ, ಕಂದಗಲ್ಲು, ಮಂಗಾಪುರ ಗ್ರಾಮದಲ್ಲಿನ ಆಯ್ದ ಹೊಲಗಳಲ್ಲಿ ಮಾಡಲಾಗಿದೆ. ಈ ವರದಿಯನ್ನು ಸರ್ಕಾರ ಕಳುಹಿಸಲಾಗುವುದು ಎಂದರು.
ವರದಿ ಆಧರಿಸಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಸಮಿತಿಯನ್ನು ಕಳುಹಿಸಲಿದೆ. ಈ ಸಮಿತಿ ಇನ್ನು ಒಂದು ವಾರದಲ್ಲಿ ಕೊಟ್ಟೂರು ತಾಲೂಕಿಗೆ ಆಗಮಿಸಿ ಸಮೀಕ್ಷೆಗೆ ಮಾಡುವ ನಿರೀಕ್ಷೆ ಇದೆ.
ಮಳೆಯಾಶ್ರೀತ ಭೂಮಿಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿ ನಷ್ಟಕ್ಕೊಳಗಾದ ರೈತನಿಗೆ ಒಂದು ಹೆಕ್ಟೇರ್‌ಗೆ 13,600 ರೂ. ಹಾಗೂ ಅಂತರ್ಜಲ ವಿಫಲವಾಗಿ ಬೆಳೆ ನಷ್ಟವಾಗಿದ್ದರೆ ಪ್ರತಿ ಹೆಕ್ಟರ್‌ಗೆ 25 ಸಾವಿರ ರೂ. ಹಾಗೂ ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 28 ಸಾವಿರ ರೂ.ಗಳನ್ನು ನೀಡುವ ಸಂಭವವಿದೆ ಎಂದರು.
ಇದನ್ನೂ ಓದಿ: ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಕಾರ್ಯಕ್ರಮ ಇಲ್ಲ, ಕೊಟ್ಟ ಮಾತಂತೆ ನಡೆದುಕೊಂಡಿದ್ದೇವೆ: ಸಿಎಂ ಸಿದ್ದರಾಮಯ್ಯ
ತಾಲೂಕಿನಲ್ಲಿ ರಾಗಿ 2 ಸಾವಿರ ಹೆಕ್ಟೇರ್, ಜೋಳ 800 ರಿಂದ 1000 ಹೆಕ್ಟೇರ್, ಹತ್ತಿ 200 ಹೆಕ್ಟೇರ್, ಸಜ್ಜೆ 700 ಹೆಕ್ಟೇರ್ ಬಿತ್ತನೆಯಾಗಿದೆ ಎಂದು ವಿವರ ನೀಡಿದರು.