ಜಿಲ್ಲೆ

ಸತತ ಮಳೆಗೆ ನೆಲ ಕಚ್ಚಿದ ಗೋವಿನಜೋಳ

ವಿವೇಕಾನಂದ ದಾಸನಕೊಪ್ಪ

ಹಾನಗಲ್ಲ: ಜುಲೈ ಹಾಗೂ ಆಗಸ್ಟ್​ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದರಿಂದ ಗೋವಿನಜೋಳ ಫಸಲು ಕೈಗೆ ಬಾರದಂತಾಗಿದೆ. ಕಳೆದ ವರ್ಷ ಮಳೆಯಾಗದೆ ಹಾನಿ ಅನುಭವಿಸಿದ್ದ ರೈತರು, ಈ ಬಾರಿ ಮಳೆಯಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ.

ತಾಲೂಕಿನಲ್ಲಿ ಜುಲೈನಲ್ಲಿ 299 ಮಿ.ಮೀ. ವಾಡಿಕೆಯಂತೆ ಮಳೆಯಾಗಬೇಕಿತ್ತು. ಆದರೆ, 504 ಮಿ.ಮೀ. ಮಳೆ ಸುರಿದಿದೆ. ಆಗಸ್ಟ್​ನಲ್ಲಿ 178 ಮಿ.ಮೀ. ಸುರಿದಿದ್ದು, ಇಲ್ಲಿಯವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ತಡವಾಗಿ ಬಿತ್ತನೆಯಾದ ಗೋವಿನಜೋಳ ಸಂಪೂರ್ಣ ಹಾನಿಯಾಗಿದೆ. ಜುಲೈ ಮತ್ತು ಆಗಸ್ಟ್​ನಲ್ಲಿ ನಿರಂತರವಾಗಿ ಜಿಟಿ ಜಿಟಿ ಮಳೆ ಆಗುತ್ತಿರುವುದರಿಂದ ಗೋವಿನಜೋಳ ಬೆಳೆ ನೆಲ ಬಿಟ್ಟು ಏಳಲಿಲ್ಲ. ಮೊದಲು ಬಿತ್ತಿದ್ದ ಗೋವಿನಜೋಳ ಕೂಡ ತೆನೆ ಕಟ್ಟದಂತಾಗಿ ಇಳುವರಿ ಕುಸಿತವಾಗಿದೆ. ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ 60,480 ಎಕರೆ ಕ್ಷೇತ್ರದಲ್ಲಿ ಗೋವಿನಜೋಳ ಬಿತ್ತನೆಯಾಗಿದೆ. ಅಧಿಕ ಮಳೆ ಸುರಿದಿದ್ದರಿಂದ ಖುಷ್ಕಿ ಬೆಳೆಯಾದ ಗೋವಿನಜೋಳ ಕೈಕೊಡುವ ಎಲ್ಲ ಲಕ್ಷಣಗಳೂ ಎದ್ದು ಕಾಣುತ್ತಿವೆ.

ಹಾನಿ ಜಂಟಿ ಸಮೀಕ್ಷೆ ಆರಂಭಿಸಿದ ತಾಲೂಕು ಆಡಳಿತ: ಬೆಳೆ ಹಾನಿಯಾದ ಪ್ರದೇಶಗಳನ್ನು ಕೂಡಲೇ ಸಮೀಕ್ಷೆ ಮಾಡುವಂತೆ ರೈತ ಸಂಘಟನೆ ಪ್ರತಿಭಟನೆ ಕೈಗೊಂಡಿತ್ತು. ಇದರಿಂದ ಎಚ್ಚೆತ್ತ ತಾಲೂಕು ಆಡಳಿತ, ಕೃಷಿ ಮತ್ತು ಕಂದಾಯ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದರಿಂದ ಬೆಳೆ ಹಾನಿಯ ಕುರಿತು ಜಂಟಿ ಸಮೀಕ್ಷೆ ಕೈಗೊಂಡಿದೆ.

ಹೋಲಿಕೆ ಮಾಡಬಾರದು: ಬೆಳೆ ಹಾನಿ ಪರಿಶೀಲಿಸುತ್ತಿರುವ ಅಧಿಕಾರಿಗಳು, ಹೊಲಗಳಲ್ಲಿ ಹಾನಿ ಪ್ರಮಾಣ ಶೇ. 33ಕ್ಕಿಂತ ಹೆಚ್ಚಾಗಿದ್ದಲ್ಲಿ ಪೂರ್ಣ ಕ್ಷೇತ್ರ ಹಾನಿಯಾಗಿರುವ ಕುರಿತು ವರದಿ ಮಾಡಬೇಕಿದೆ. ಇದೆಲ್ಲವೂ ಸರ್ಕಾರದ ಮಾರ್ಗಸೂಚಿಯಲ್ಲಿದ್ದರೂ, ತಪ್ಪು ಗ್ರಹಿಕೆಯಿಂದಾಗಿ ಕೃಷಿ ಇಲಾಖೆ ಅಧಿಕಾರಿಗಳು ಹಾನಿಯಾದ ಕ್ಷೇತ್ರವನ್ನು ಪ್ರತ್ಯೇಕಿಸಿ ಗುಂಟೆವಾರು ಬೆಳೆ ಹಾನಿಯ ವರದಿ ಸಿದ್ಧಪಡಿಸುತ್ತಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಹಾನಗಲ್ಲ ತಾಲೂಕು ಮಲೆನಾಡಿನ ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಹೊಂದಿಕೊಂಡಿರುವುದೇ ಸತತ ಮಳೆಗೆ ಕಾರಣವಾಗುತ್ತಿದೆ. ಹೀಗಾಗಿ ಉಳಿದ ತಾಲೂಕುಗಳಲ್ಲಿ ಅಧಿಕಾರಿಗಳು ಸಲ್ಲಿಸುವ ಬೆಳೆಹಾನಿ ವರದಿಯನ್ನು ಹಾನಗಲ್ಲ ತಾಲೂಕಿನೊಂದಿಗೆ ಹೋಲಿಕೆ ಮಾಡಬಾರದು. ಜಿಲ್ಲೆಯಲ್ಲಿ ಹಾನಗಲ್ಲ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿರುವುದರಿಂದ ರಾಜ್ಯ ಸರ್ಕಾರ ಹಾನಗಲ್ಲ ತಾಲೂಕನ್ನು ಜಿಲ್ಲೆಯಲ್ಲಿ ವಿಶೇಷ ತಾಲೂಕು ಎಂದು ಪರಿಗಣಿಸಿ, ಬೆಳೆಹಾನಿ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರೈತ ಸಂಘ ಆಗ್ರಹಿಸಿದೆ.

ಸತತ ಮಳೆಗೆ ಗೋವಿನಜೋಳ, ಸೋಯಾಅವರೆ, ಹತ್ತಿ ಬೆಳೆ ಸಂಪೂರ್ಣ ಹಾನಿಯಾಗಿವೆ. ಆದರೆ, ಕೃಷಿ-ಕಂದಾಯ ಇಲಾಖೆ ಅಧಿಕಾರಿಗಳು ತಾಲೂಕಿನ ನದಿದಡದಲ್ಲಿನ ಕೇವಲ 620 ಹೆಕ್ಟೇರ್ ಮಾತ್ರ ಬೆಳೆಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ. ವಾಸ್ತವವಾಗಿ ತಾಲೂಕಿನಾದ್ಯಂತ ಬಿತ್ತನೆಯಾಗಿರುವುದರಲ್ಲಿ ಅರ್ಧಕ್ಕಿಂತ ಹೆಚ್ಚು ಗೋವಿನಜೋಳ ಹಾನಿಗೊಳಪಟ್ಟಿದೆ. ಇದನ್ನು ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆ. 29ರಂದು ಟ್ರ್ಯಾಕ್ಟರ್​ನೊಂದಿಗೆ ರೈತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. | ಮರಿಗೌಡ ಪಾಟೀಲ, ರೈತ ಸಂಘದ ತಾಲೂಕು ಅಧ್ಯಕ್ಷ ಗೋವಿನಜೋಳ ಬೆಳೆ ಹಾನಿಯಾಗಿರುವ ಕುರಿತು ರೈತರ ಅರ್ಜಿ ಸ್ವೀಕರಿಸುವಂತೆ ಕೃಷಿ ಇಲಾಖೆ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಚಿಸಲಾಗಿದೆ. ಅರ್ಜಿ ಸಲ್ಲಿಸಿದವರ ಹೊಲಗಳಿಗೆ ತೆರಳಿ ಬೆಳೆ ಹಾನಿ ಪರಿಶೀಲಿಸಿ, ಇನ್ನೆರಡು ದಿನಗಳಲ್ಲಿ ವರದಿ ಸಲ್ಲಿಸಲು ತಿಳಿಸಿದ್ದೇವೆ. ಕೃಷಿ-ಕಂದಾಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುತ್ತಿದ್ದಾರೆ. ಸಮಗ್ರ ವರದಿ ಸಿದ್ಧಪಡಿಸಿ ಮುಂದಿನ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಕಳಿಸಿಕೊಡಲಾಗುವುದು. | ಎಸ್. ರೇಣುಕಮ್ಮ, ತಹಸೀಲ್ದಾರ್, ಹಾನಗಲ್ಲ