ಜಿಲ್ಲೆ

ಇಂದಿನ ದಿನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ: ಡಾ.ಡಿ.ತಿಮ್ಮಯ್ಯ

ಮೈಸೂರು: ಇಂದಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಬಹುಮುಖ್ಯವಾಗಿದೆ. ಆರೋಗ್ಯ ಸರಿ ಇದ್ದರೆ ಮನಸ್ಸು, ದೇಹ ಸಮಚಿತ್ತದಿಂದ ಇರಲು ಸಾಧ್ಯ ಎಂದು ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.

ಸರ್ಕಾರಿ ಆಯುರ್ವೇದ ಸಂಶೋಧನಾ ಸಂಸ್ಥೆದ ಸಹಯೋಗದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜು ಆಹಾರ ವಿಜ್ಞಾನ ಮತ್ತು ಪೌಷ್ಟಿಕತೆ ವಿಭಾಗದಿಂದ ಯುವರಾಜ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಸಂಕಿರಣ ಯುವ ಆರೋಗ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಒಳ್ಳೆಯ ಅಭ್ಯಾಸ, ಶಿಸ್ತು ರೂಢಿಸಿಕೊಳ್ಳುವ ಮೂಲಕ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಇಂದಿನ ದಿನದಲ್ಲಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಜತೆಗೆ ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮವಾಗಿದ್ದರೆ ಮಾತ್ರ ವ್ಯಕ್ತಿ ಮತ್ತು ಸಮಾಜ ಉತ್ತ ಮವಾಗಿರಲು ಸಾಧ್ಯ ಎಂದರು.

ಎಲ್ಲಕ್ಕೂ ಮೊದಲು ಆತ್ಮಸ್ಥೈರ್ಯ ಅತ್ಯಂತ ಅವಶ್ಯವಾದದ್ದು. ಒಳ್ಳೆಯ ಅಭ್ಯಾಸಗಳು, ಶಿಸ್ತು ರೂಢಿಸಿಕೊಳ್ಳಬೇಕು. ಯಾವುದೇ ಸಂಭವಗಳು, ಹಣೆಬರಹ, ವಿಧಿ ಎಂಬುದಲ್ಲ. ನಮ್ಮ ನಿರ್ಧಾರಗಳ ಮೇಲೆ ಜೀವನ ನಿಂತಿದೆ ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ, ದೀಕ್ಷಿತ್ ಆಯುರ್ವೇದ ಆಸ್ಪತ್ರೆ ನಿರ್ದೇಶಕ ಡಾ.ಅನಿಲ್ ಕುಮಾರ್, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀ ನಾರಾಯಣ ಶೆಣೈ, ವೈದ್ಯರಾದ ಡಾ.ಎಂ.ಎಸ್.ಮಹೇಶ್, ಡಾ.ಆಂಥೋನಿ ಪೌಲ್‌ರಾಜ್, ಡಾ.ಎನ್.ರಾಜೇಶ್, ಪ್ರೊ.ಆರ್.ಶೇಖರ ನಾಯಕ ಇತರರು ಇದ್ದರು.

ಸಮುದಾಯ ಪ್ರಕ್ರಿಯೆಗಳು ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆ ನಿವೃತ್ತ ಸಲಹೆಗಾರ ಡಾ.ಎಂ.ಎ.ಬಾಲಸುಬ್ರಹ್ಮಣ್ಯ ಅವರು ಯುವಜನರ ಆರೋಗ್ಯಕ್ಕೆ ಸಮಗ್ರ ವಿಧಾನ ಹಾಗೂ ಮೂಳೆ ಶಸ್ತ್ರಚಿಕಿತ್ಸಕ ಸಲಹೆಗಾರ ಡಾ.ಎಂ.ಆರ್.ಸೀತಾರಾಮ್ ಅವರು ಯುವಜನರ ಆರೋಗ್ಯದ ಸವಾಲುಗಳು ಮತ್ತು ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.