ಬೆಂಗಳೂರು: ರೈಲ್ವೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಇದು ಶಾಶ್ವತ ಸಂಪನ್ಮೂವಾಗಿದ್ದು ನಿರ್ಲಕ್ಷ್ಯ ತೋರಬಾರದು. ಅಧಿಕಾರಿಗಳು ನಿರಂತರವಾಗಿ ತಪಾಸಣೆ ನಡೆಸಿ ಉತ್ತಮ ಕೆಲಸ ಮಾಡಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ಜಿಲ್ಲೆಯ ವಿವಿಧೆಡೆ ಪ್ರಗತಿಯಲ್ಲಿರುವ ರಸ್ತೆ ಮೇಲ್ಸೇತುವೆಗಳು, ರೈಲು ಹಳಿ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದರು. ತಪಾಸಣೆ ವೇಳೆ ಕಳೆಪೆ ಕೆಲಸ ಕಂಡು ಬಂದರೆ, ಗುತ್ತಿಗೆದಾರನಿಂದ ಮರು ಕೆಲಸ ಮಾಡಿಸಬೇಕು. ರೈಲ್ವೆ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ, ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ರೈಲು ಸಂಚಾರಕ್ಕೆ ಆಗುತ್ತಿರುವ ಅಡೆತಡೆಗಳನ್ನು ನಿವಾರಿಸುವ ಕ್ರಮವಹಿಸಲಾಗಿದೆ. ತಡ ಮಾಡದೆ ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳಿಸಬೇಕು. ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣ ಪೂರ್ಣಗೊಂಡ ನಂತರ ಸುಗಮ ಸಂಚಾರಕ್ಕೆ ಅನುವು ಆಗಲಿದೆ. ಅಲ್ಲಿಯ ತನಕ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.
ಶಾಸಕರಾದ ಬಿ. ಸುರೇಶ್ ಗೌಡ, ಜಿ.ಬಿ. ಜ್ಯೋತಿ ಗಣೇಶ್, ಮುಖ್ಯ ಇಂಜಿನಿಯರ್ಗಳಾದ ಪ್ರಸಾದ್, ಸೂರಜ್ ಕುವಾರ್, ಉಪ ಮುಖ್ಯ ಇಂಜಿನಿಯರ್ ರಜತ್, ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ಎಂಜಿನಿಯರ್ ಹರ್ಷಿತ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.
ವಿವಿಧೆಡೆ ಕಾಮಗಾರಿ ಪರಿಶೀಲನೆ:
ನಿಟ್ಟೂರು ಮೈಸೂರು ಗೇಟ್, ಬೆಂಚಗೆರೆ, ಮಲ್ಲಸಂದ್ರ, ಬಟವಾಡಿ, ಬಡ್ಡಿಹಳ್ಳಿ, ಮೈದಾಳ, ಪಂಡಿತನಹಳ್ಳಿ, ನಂದಿಹಳ್ಳಿ, ಕಳ್ಳಿಪಾಳ್ಯ, ಬಿಳಿಪಾಳ್ಯ ಗೇಟ್ ಲೆವೆಲ್ ಕ್ರಾಸಿಂಗ್ ಗೇಟ್ ಬದಲಿಗೆ ನಿರ್ಮಿಸಲಾಗುತ್ತಿರುವ ರಸ್ತೆ ಮೇಲ್ಸೇತುವೆ ಕಾಮಗಾರಿ, ಗುಬ್ಬಿ ರೈಲ್ವೆ ನಿಲ್ದಾಣದಲ್ಲಿ 19.34 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಲು ರಸ್ತೆ ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಿಸಿ, ಅಧಿಕಾರಿ, ಗುತ್ತಿಗೆದಾರರಿಗೆ ಸೋಮಣ್ಣ ಸಲಹೆ ಸೂಚನೆ ನೀಡಿದರು.