ಸೋಮವಾರಪೇಟೆ ಪಟ್ಟಣದಲ್ಲಿ ಮೀನಿನ ಮೊಬೈಲ್ ಕ್ಯಾಂಟಿನ್‌ಗೆ ಶಾಸಕ ಡಾ.ಮಂತರ್‌ಗೌಡ ಚಾಲನೆ ನೀಡಿದರು. ಜಯಂತಿ, ಮಹೇಶ್, ಲೋಕೇಶ್, ಮಿಲನಾ ಇದ್ದರು. 
ಜಿಲ್ಲೆ

ಆಹಾರದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಿ

ಅಭಿನಯ್ ಎಚ್.ಎಂ

ಸೋಮವಾರಪೇಟೆ: ಮೀನಿನಲ್ಲಿ ಎಲ್ಲ ರೀತಿಯ ಪೌಷ್ಟಿಕಾಂಶಗಳಿದ್ದು, ಕೈಗೆಟುಕವ ದರದಲ್ಲಿ ಜನರಿಗೆ ಮೀನು ಊಟ ಸಿಗಬೇಕೆಂಬ ಉದ್ದೇಶದಿಂದ ಮೀನಿನ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.

ಮತ್ಸೃ ಸಂಜೀವಿನಿ ಯೋಜನೆಯಡಿ ತಾಲೂಕು ಪಂಚಾಯಿತಿ ಮತ್ತು ಮೀನುಗಾರಿಕಾ ಇಲಾಖೆ ವತಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗ ಪ್ರಾರಂಭವಾದ ಮೀನು ಕ್ಯಾಂಟಿನ್‌ಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಹಾರಂಗಿ ಹಿನ್ನೀರು, ಕೆರೆಗಳು, ನದಿಗಳಲ್ಲಿ ಮೀನು ಸಾಕಣೆ ನಡೆಯುತ್ತಿದೆ. ಹಾಗಾಗಿ ತಾಜಾ ಮೀನುಗಳ ಆಹಾರವೂ ಇಲ್ಲಿನ ಜನರಿಗೆ ಸಿಗಬೇಕು. ಕ್ಯಾಂಟೀನ್ ಮಾಲೀಕರು ಮೀನುಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಪಡೆದುಕೊಂಡು ಕಡಿಮೆ ದರದಲ್ಲಿ ಮೀನಿನ ಊಟ ನೀಡಬೇಕು. ಆಹಾರದಲ್ಲಿ ಗುಣಮಟ್ಟದೊಂದಿಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಟ್ಟಣದೊಳಗೆ ಎಲ್ಲಿ ಬೇಕಾದರೂ ಆಟೋ ನಿಲ್ಲಿಸಿ ಊಟ ನೀಡಬಹುದು. ಪಂಚಾಯಿತಿ ಆಡಳಿತ ಕೂಡ ಮೊಬೈಲ್ ಕ್ಯಾಂಟೀನ್‌ಗೆ ಸೌಲಭ್ಯ ಒದಗಿಸಿ ಕೊಡಬೇಕು ಎಂದು ಹೇಳಿದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ಕೊಡಗಿನ ಪ್ರವಾಸೋದ್ಯಮ ಸ್ಥಳಗಳಲ್ಲಿ ಮೀನಿನ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲು ಇಲಾಖೆ ಯೋಜನೆ ರೂಪಿಸಿದೆ. ಜಿಲ್ಲೆಯ ಮಟ್ಟಿಗೆ ಮೊದಲ ಕ್ಯಾಂಟಿನ್ ಸೋಮವಾರಪೇಟೆ ಪಟ್ಟಣದಲ್ಲಿ ಪ್ರಾರಂಭವಾಗಿದೆ. ಕುಶಾಲನಗರ ಹಾಗೂ ಹಾರಂಗಿಯಲ್ಲಿ ಮುಂದಿನ ದಿನಗಳಲ್ಲಿ ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.

ಮಲೆನಾಡು ಪ್ರದೇಶದ ಸಿಹಿ ನೀರಿನಲ್ಲಿ ಬೆಳೆಯುವ ಮೀನು ಉತ್ತಮ ಪೌಷ್ಟಿಕಾಂಶಯುಕ್ತ ಆಹಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಯಥೇಚ್ಚವಾಗಿ ಮೀನು ದೊರೆಯುತ್ತಿದೆ. ಅನೇಕ ರೈತರು ಮೀನು ಕೃಷಿಯನ್ನು ಮುಖ್ಯ ಕಸುಬು ಮಾಡಿಕೊಂಡಿದ್ದಾರೆ. ಮೀನು ಕೃಷಿ ಲಾಭದಾಯಕವಾಗಿದೆ ಎಂದು ಹೇಳಿದರು.

ಇಲ್ಲಿನ ಶಾಸಕರು ಮೀನು ಕೃಷಿಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಅನೇಕ ಯೋಜನೆಗಳು ಕಾರ್ಯಗತವಾಗಲು ಕಾರಣಕರ್ತರಾಗಿದ್ದಾರೆ. ಕ್ಯಾಂಟೀನ್ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮಹೇಶ್, ಪಪಂ ಮುಖ್ಯಾಧಿಕಾರಿ ಸತೀಶ್, ಪ್ರಮುಖರಾದ ಕೆ.ಎಂ.ಲೋಕೇಶ್, ಎಚ್.ಎ.ನಾಗರಾಜ್ ಇದ್ದರು.