ಸೋಮವಾರಪೇಟೆ: ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸೋಮವಾರಪೇಟೆ ಘಟಕದ ಉದ್ಘಾಟನೆ ಪಟ್ಟಣದ ಕ್ಲಬ್ ರಸ್ತೆಯಲ್ಲಿರುವ ಜೇನು ಸೊಸೈಟಿ ಕಟ್ಟಡದಲ್ಲಿ ಶುಕ್ರವಾರ ನಡೆಯಿತು.
ಜೀವನ ಕಲಾ ಸಂಸ್ಥೆಯ ನೂತನ ಘಟಕವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಯೋಗ, ಧ್ಯಾನ ಅತ್ಯಾವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಸ್ಥಳೀಯವಾಗಿ ಸಾರ್ವಜನಿಕರಿಗೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ಘಟಕ ಆರಂಭಿಸಿರುವುದು ಶ್ಲಾಘನೀಯ ಎಂದರು.
ಪ್ರತಿಯೊಬ್ಬರು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಕೊಳ್ಳಬೇಕು. ಆರೋಗ್ಯವೇ ಭಾಗ್ಯ ಎಂಬುದನ್ನು ಮನಗಾಣಬೇಕು. ಸಂಸ್ಥೆಯ ವತಿಯಿಂದ ಉಚಿತ ಯೋಗಾಭ್ಯಾಸದಂತಹ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ನೂತನ ಘಟಕ ಉದ್ಘಾಟನೆ ಅಂಗವಾಗಿ ಕೇಂದ್ರದಲ್ಲಿ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಚಂದ್ರಶೇಖರ್ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮ ನಡೆಯಿತು. ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕಿ ರಾಗಿಣಿ ಹಾಗು ಬಾಳೆಲೆಯ ಶಿಕ್ಷಕಿ ಭವಾನಿ ನಾಣಯ್ಯ ಅವರ ನೇತೃತ್ವದಲ್ಲಿ ಶ್ರೀ ಗುರುಪೂಜೆ, ಸತ್ಸಂಗ ನೆರವೇರಿತು.
ಈ ಸಂದರ್ಭ ಹೋಂ ಸ್ಟೇ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಸಿ.ಕೆ. ರೋಹಿತ್, ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶಾಂತ್‌ಕುಮಾರ್, ಗೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಅಜ್ಜಳ್ಳಿ, ಕೂಗೂರು ಕೊಮಾರಪ್ಪ, ಜೇನು ಸೊಸೈಟಿಯ ನಿರ್ದೇಶಕ ಬೋಪಣ್ಣ, ಗೋಪಾಲ್, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಚಂದ್ರಿಕಾ ಕುಮಾರ್ ಇದ್ದರು.