ಜಿಲ್ಲೆ

ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳೆಯರು ಹದಿಹರೆಯದ ವಯಸ್ಸಿನಲ್ಲಿ ದೃಢವಾಗಿರಬೇಕು. ಭಾವನೆಗಳ ಮೇಲೂ ನಿಯಂತ್ರಣ ಹೊಂದಿರಬೇಕು ಎಂದು ಸ್ತ್ರೀರೋಗ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಹೇಳಿದರು.
ನಗರದ ಕೆಸಿಡಿ ಕಾಲೇಜಿನ ಮಹಿಳೆಯೆ ಅಸೋಸಿಯೇಷನ್, ಕಾಲೇಜಿನ ಫಾರೆನ್ ಹಾಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಮುಟ್ಟಿನ ನೈರ್ಮಲ್ಯ ಮತ್ತು ಹದಿಹರೆಯದ ಸಮಸ್ಯೆಗಳು’ ಕುರಿತು ಉಪನ್ಯಾಸ ನೀಡಿದರು.
ಹದಿಹರೆಯದಲ್ಲಿ ಮಹಿಳೆಯರು ದೈಹಿಕ, ಮಾನಸಿಕ ಬದಲಾವಣೆಗಳಿಗೆ ಒಳಗಾಗುವುದು ಸಹಜ. ಋತುಚಕ್ರದ ಹಂತದಲ್ಲಿ ಹಾರ್ಮೋನ್ ಬದಲಾವಣೆಗಳು ಸಾಮಾನ್ಯ. ಹದಿಹರೆಯ ವಯಸ್ಸಿನ ಹೆಣ್ಣುಮಕ್ಕಳು ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕು. ಉತ್ತಮ ಅಭ್ಯಾಸ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಅನೇಕ ಸಮಸ್ಯೆ ಎದುರಿಸುತ್ತಾರೆ. ಮುಟ್ಟಿನ ಸೆಳೆತ ಕಡಿಮೆ ಮಾಡಲು ಆಹಾರ ಸೇವನೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂದರ್ಭದಲ್ಲಿ ಆತಂಕ ಮತ್ತು ಒತ್ತಡ ಪಿಸಿಒಡಿ, ಸಮಸ್ಯೆಗೆ ಕಾರಣವಾಗಬಹುದು. ಆರೋಗ್ಯವು ನಮ್ಮ ಜೀವನಶೈಲ್ಲೇ ಹೊರತು ಬೇರೇನೂ ಅಲ್ಲ. ಆರೋಗ್ಯಕರ ಮತ್ತು ಉತ್ತಮ ಜೀವನ ನಡೆಸುವುದು ಮುಖ್ಯ. ಪ್ರೋಟಿನ್‌ಯುಕ್ತ ಆಹಾರ, ನಾರಿನ ಅಂಶ ಇರುವ ಆಹಾರ ಸೇವಿಸಬೇಕು ಎಂದರು. ಡಾ. ಮಂಜುಳಾ ಚಲುವಾದಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್.ಎ. ಕೋಳೂರ, ಮಹಿಳಾ ಮಂಡಳಿ ಅಧ್ಯಕ್ಷೆ ವಿಭಾವರಿ ಕುಲಕರ್ಣಿ, ಡಾ. ರಜನಿ ಎಚ್, ಡಾ. ಸ್ಟೆಲ್ಲಾ ಸ್ಟೀವನ್, ಡಾ. ಶೀಲಾ ಭಂಡಾರಿ, ಡಾ. ನೀಲಾಂಬಿಕಾ ಪಾಟೀಲ, ವಿದ್ಯಾರ್ಥಿನಿಯರು, ಇತರರು ಇದ್ದರು.