ಜಿಲ್ಲೆ

ವಕೀಲ ವೃತ್ತಿಯ ಘನತೆ, ಗೌರವ ಕಾಪಾಡಿಕೊಳ್ಳಿ: ಬಿದ್ದಪ್ಪ

reportermys

ಮಡಿಕೇರಿ: ವಕೀಲರು ತಮ್ಮ ವಕೀಲ ವೃತ್ತಿಯ ಘನತೆ, ಗೌರವ ಕಾಪಾಡಿಕೊಳ್ಳಬೇಕು ಎಂದು ಹಿರಿಯ ವಕೀಲ ಎಂ.ಎಸ್.ಬಿದ್ದಪ್ಪ ಹೇಳಿದರು.


ಮಡಿಕೇರಿ ವಕೀಲರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಆಯೋಜಿಸಿದ್ದ ವಕೀಲರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಕೀಲ ವೃತಿ ತುಂಬಾ ಪವಿತ್ರವಾದದ್ದು, ಕಷ್ಟ ಪಟ್ಟು ಶೃದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. ನ್ಯಾಯಾಂಗ ಮತ್ತು ಇತರ ವಕೀಲರ ಬಗ್ಗೆ ಗೌರವ ಭಾವನೆ ಹೊಂದಿ, ವಕೀಲ ವೃತಿಯ ಘನತೆ, ಗೌರವ ಕಾಪಾಡಿಕೊಳ್ಳಬೇಕು. ಈ ಮೂಲಕ ನೊಂದ ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಕಿರಿಯ ವಕೀಲರಿಗೆ ಕಿವಿಮಾತು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಕೆ.ಡಿ.ದಯಾನಂದ ಮಾತನಾಡಿ, ಭಾರತದ ಮೊದಲ ರಾಷ್ಟ್ರಪತಿಗಳಾದ ಡಾ.ಬಾಬು ರಾಜೇಂದ್ರ ಪ್ರಸಾದ್‌ರವರು ಸ್ವತ ವಕೀಲರಾಗಿದ್ದು ಅವರ ಹುಟ್ಟುಹಬ್ಬವನ್ನು ಭಾರತದಾದ್ಯಂತ ವಕೀಲರ ದಿನಾಚರಣೆಯನ್ನಾಗಿ ಆಚರಿಸುತಿದ್ದೇವೆ. ಅವರ ತತ್ವದಾರ್ಶ, ನಮಗೆಲ್ಲರಿಗೂ ಪ್ರೇರಣೆ ಎಂದು ಹೇಳಿದರು.


ಸಾಧನೆಗೆ ಶ್ರಮದ ಹೊರತು ಬೇರೆ ಮಾರ್ಗವಿಲ್ಲ. ಸಾಧಿಸಿದವನಿಗೆ ಸೋಲಿಲ್ಲ ಎಂಬ ಮಾತು ಇದೆ. ಕಾಲ ಯಾವತು ಒಂದೇ ಇರುವುದಿಲ್ಲ. ಈ ದಿನ ಸೋತವನು ನಾಳೆ ಗೆಲ್ಲುತಾನೆ. ಕಾಲ ನಮಗಾಗಿ ಕಾಯೋದಿಲ್ಲ. ಕಾಲದ ಜತೆ ಹೊಂದಾಣಿಕೆ ಮಾಡಿಕೊಂಡು ದೃಢ ಮನಸಿನಿಂದ ಮುನ್ನಡೆದರೆ ವಕೀಲ ವೃತಿಯಲ್ಲಿ ಖಂಡಿತಾ ಯಶಸ್ಸು ಸಿಗುತದೆ ಎಂದು ಹೇಳಿದರು.


ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಉದ್ಘಾಟನೆಯ ಸವಿನೆನಪಿಗಾಗಿ ಹೊರತರಲಾದ ಸ್ಮರಣಿಕೆಯನ್ನು ಬಿಡುಗಡೆಗೊಳಿಸಲಾಯಿತು. ಎಲ್ಲಾ ವಕೀಲರು ದಿನನಿತ್ಯದ ಜಂಜಾಟ ಮರೆತು ಒಟ್ಟಿಗೆ ಸೇರಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಪಟ್ಟರು.


ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಸ್.ತಮ್ಮಯ್ಯ, ಜಂಟಿ ಕಾರ್ಯದರ್ಶಿ ಎಂ.ವಿ.ಸಂಜಯ್ ರಾಜ್, ಖಜಾಂಚಿ ಬಿ.ಸಿ.ದೇವಿಪ್ರಸಾದ್, ಸಂಘದ ನಿರ್ದೇಶಕರಾದ ಪಿ.ಬಿ. ದಿವ್ಯಾ, ಪ್ರಧಾನ ಕಾರ್ಯದರ್ಶಿ ಎಂ.ಕೆ.ಅರುಣಕುಮಾರ್, ಸಂಘದ ಪದಾಧಿಕಾರಿಗಳು ಹಾಜರಿದ್ದರು.