ಹುಣಸೂರು ನಗರದಲ್ಲಿ ಆ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಮತ್ತು ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಲೋಹಿತ್ ಅವರನ್ನು ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಮುಖಂಡರಾದ ಅನಂತ್, ಗಣೇಶ್ ಕುಮಾರಸ್ವಾಮಿ, ವೆಂಕಟೇಶ್, ಮೈಲಾರಿ, ಸುರೇಶ್ ಇದ್ದರು. 
ಜಿಲ್ಲೆ

ಮೈಲಾರಲಿಂಗೇಶ್ವರಸ್ವಾಮಿ ವಾರ್ಷಿಕೋತ್ಸವ ಸಂಪನ್ನ

ಲೋಕೇಶ್ ಮನು. ಡಿ

ಹುಣಸೂರು: ನಗರದ ಮಾರುತಿ ಬಡಾವಣೆಯ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇಗುಲದಲ್ಲಿ ಫೆ.10ರಿಂದ 12ರವರೆಗೆ ಮೂರು ದಿನಗಳ ಕಾಲ ಆಯೋಜಿಸಿದ್ದ ಶ್ರೀ ಮೈಲಾರಲಿಂಗೇಶ್ವರ ಉತ್ಸವಮೂರ್ತಿ ಪ್ರತಿಷ್ಠಾಪನೆ, ಭರತ ಹುಣ್ಣಿಮೆ ಆಚರಣೆ ಹಾಗೂ ದೇವಾಲಯದ ವಾರ್ಷಿಕೋತ್ಸವ ಸಮಾರಂಭ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.

ಮೊದಲ ದಿನ ಸೋನವಾರ ಬೆಳಗ್ಗೆ ದೇವರಿಗೆ ಪುಣ್ಯಾಹ, ಗಣಪತಿ ಪೂಜೆ, ಕಳಶಾರಾಧನೆ, ನವಗ್ರಹ ಪೂಜೆ, ಗಣಪತಿ ಹೋಮ ಪರಿವಾರ ದೇವತೆಗಳ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಫೆ.11ರಂದು ಸಂಜೆ ದೇವರ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಫೆ.12ರಂದು ಮೈಲಾರಲಿಂಗೇಶ್ವರ ಸ್ವಾಮಿಗೆ, ಗಂಗೆಮಾಳಮ್ಮ ಮತ್ತು ಗಣಪತಿ ದೇವರುಗಳಿಗೆ ಪಂಚಾಮೃತ ಅಭಿಷೇಕ, ಷೋಡಶೋಪಚಾರ ಪೂಜೆ, ದೋಣಿ ಪೂಜೆ, ಮಹಾಮಂಗಳಾರತಿ ನಂತರ ನಡೆದ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು.

ಶಾಸಕ ಜಿ.ಡಿ.ಹರೀಶ್‌ಗೌಡ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಶ್ರೀ ಮೈಲಾರಲಿಂಗೇಶ್ವರ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಟ್ರಸ್ಟ್‌ನ ಅಧ್ಯಕ್ಷ ವೆಂಕಟೇಶ್, ಗೌರವಾಧ್ಯಕ್ಷ ಅನಂತ್, ಸದಸ್ಯರಾದ ಸುರೇಶ್, ಮೈಲಾರಿ, ಮಲ್ಲೇಶ್, ನವೀನಾ ಮೈಲಾರ್, ಯಶ್ವಂತ್ ಮತ್ತು ಭಕ್ತರು ಇದ್ದರು.